ನವದೆಹಲಿ: ‘‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪಕ್ಷದೊಳಗಿನಿಂದಲೇ ಪಿತೂರಿ ನಡೆದಿಯೇ…?‘‘
ಇಂತಹ ಒಂದು ಪ್ರಶ್ನೆಯನ್ನು ಮುಂದಿಟ್ಟವರು ಕೇಂದ್ರ ಸಚಿವ ಅನುರಾಗ್ ಠಾಕೂರ್…
ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹಗೊಳ್ಳಲು ಕಾರಣವಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಪರ ನಿಲ್ಲಲು ಕಾಂಗ್ರೆಸ್ ನಿಂದ ಯಾವ ಪ್ರಮುಖ ವಕೀಲರೂ ಯಾಕೆ ಮುಂದೆ ಬಂದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ ನಾಯಕನ ವಿರುದ್ಧ ಪಕ್ಷದೊಳಗಿನಿಂದಲೇ ಪಿತೂರಿ ನಡೆದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಟೈಮ್ಸ್ ನೆಟ್ ವರ್ಕ್ ಇಂಡಿಯಾ ಡಿಜಿಟಲ್ ಫೆಸ್ಟ್ ನಲ್ಲಿ ಮಾತನಾಡಿದ ಅನುರಾಗ್ ಠಾಕೂರ್, ‘ರಾಹುಲ್ ಗಾಂಧಿ ಇಂತಹ ಸರಣಿ ತಪ್ಪುಗಳನ್ನು ಮಾಡಿದ್ದು, ಅವರ ವಿರುದ್ಧ ದೇಶಾದ್ಯಂತ 7 ಮಾನನಷ್ಟ ಮೊಕದ್ದಮೆಗಳಿವೆ. ರಾಹುಲ್ ಗಾಂಧಿ ಅನರ್ಹತೆ ಪ್ರಕರಣದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ‘‘ ಎಂದರು.
ಮಾನಹಾನಿ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಘೋಷಣೆಯಾದಾಗಲೇ ರೆಪ್ರೆಸೆಂಟೇಶನ್ ಆಫ್ ದ ಪೀಪಲ್ ಆಕ್ಟ್ (ಜನತಾ ಪ್ರಾತಿನಿಧ್ಯ ಕಾಯ್ದೆ) ಪ್ರಕಾರ ರಾಹುಲ್ ಅನರ್ಹಗೊಂಡಿದ್ದಾರೆ ಎಂದ ಅನುರಾಗ್ ಠಾಕೂರ್, ‘‘ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆಯೇ?, ಕಾಂಗ್ರೆಸ್ ನೊಳಗೆ ಏನಾದರೂ ಪಿತೂರಿ ನಡೆಯುತ್ತಿದೆಯೇ?, ಪವನ್ ಖೇರಾ ಪರ ನಿಲ್ಲಲು ಗಂಟೆಯೊಳಗೆ ಕಾಂಗ್ರೆಸ್ ವಕೀಲರ ದಂಡೇ ಬಂದಿತ್ತು ಎನ್ನುವುದು ಆಶ್ಚರ್ಯಕರ. ರಾಹುಲ್ ಗಾಂಧಿ ಪರ ಕಾಂಗ್ರೆಸ್ ನಾಯಕರು ಯಾಕೆ ನಿಂತಿಲ್ಲ?, ಇದು ದೊಡ್ಡ ಪ್ರಶ್ನೆ‘‘ ಎಂದರು.