ಟೆಹ್ರಾನ್: ಇರಾನ್(Iran) ರಾಜಧಾನಿ ಟೆಹ್ರಾನ್‌ನಿಂದ ಪ್ರಕಟವಾಗುವ ಅಲ್ಲಿನ ಸರ್ಕಾರಿ ನಿಯಂತ್ರಣದ ಪ್ರಮುಖ ಪತ್ರಿಕೆಯೊಂದು ಜಗತ್ತನ್ನೇ ಬೆಚ್ಚಿಬೀಳಿಸುವಂತಹ ವರದಿಯೊಂದನ್ನು ಪ್ರಕಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿಶ್ವದ ಪ್ರಮುಖ 13 ಶಕ್ತಿಶಾಲಿ ನಾಯಕರ ಹೆಸರನ್ನು ಪ್ರಕಟಿಸಿರುವ ಪತ್ರಿಕೆ, ಇವರೆಲ್ಲರೂ ಇರಾನ್‌ನ “ಸೇಡಿನ ಗುರಿಗಳು” (Revenge Targets) ಎಂದು ಬಹಿರಂಗವಾಗಿ ಘೋಷಿಸಿದೆ. ಇದು ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಆತಂಕ ಹಾಗೂ ಸಂಚಲನ ಮೂಡಿಸಿದೆ.
ಯಾರೆಲ್ಲ ಇದ್ದಾರೆ ಈ ಹಿಟ್‌ಲಿಸ್ಟ್‌ನಲ್ಲಿ?
ಇರಾನ್ ಅಧಿಕಾರಿಗಳು ಪ್ರಕಟಿಸಿರುವ ಈ ಪಟ್ಟಿಯಲ್ಲಿ ಕೇವಲ ಅಮೆರಿಕ ಅಥವಾ ಇಸ್ರೇಲ್ ಮಾತ್ರವಲ್ಲದೆ, ಯುರೋಪಿನ ಪ್ರಮುಖ ದೇಶಗಳ ನಾಯಕರ ಹೆಸರುಗಳೂ ಇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಸೇರಿದಂತೆ ಒಟ್ಟು 13 ಜನ ಪ್ರಮುಖ ನಾಯಕರನ್ನು ಇರಾನ್ ತನ್ನ ಮುಖ್ಯ ಟಾರ್ಗೆಟ್ ಮಾಡಿಕೊಂಡಿದೆ.
ಹೆಚ್ಚಿದ ಜಾಗತಿಕ ಆತಂಕ
ಇರಾನ್ ಹಾಗೂ ಪಾಶ್ಚಿಮಾತ್ಯ ದೇಶಗಳ ನಡುವೆ ಕಳೆದ ಕೆಲವು ಸಮಯದಿಂದ ಉದ್ವಿಗ್ನ ವಾತಾವರಣ ನೆಲೆಸಿದೆ. ಇದರ ಬೆನ್ನಲ್ಲೇ ಅಧಿಕೃತವಾಗಿ ಪತ್ರಿಕೆಯೊಂದರಲ್ಲಿ ಇಂತಹದ್ದೊಂದು ಪಟ್ಟಿ ಪ್ರಕಟವಾಗಿರುವುದು ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ನಾಯಕರ ಭದ್ರತೆಗೆ ಈಗ ಆಯಾ ದೇಶಗಳು ಹೆಚ್ಚಿನ ಆದ್ಯತೆ ನೀಡಲಾರಂಭಿಸಿದ್ದು, ಇರಾನ್‌ನ ಈ ಉದ್ಧಟತನದ ಹೆಜ್ಜೆಗೆ ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ವರದಿಯು ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಎಸ್. ಜಾನಕಿ ಚಿತಾಭಸ್ಮ ವಿಸರ್ಜನೆ