ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿದ್ದು, ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ದಿಗ್ಬಂಧನ ಹೇರುವುದಾಗಿ ಎಚ್ಚರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ (Iran) ಈಗ ಭೀಕರ ಪ್ರತ್ಯುತ್ತರ ನೀಡಿದೆ.
ಇರಾನ್ ಹೇಳಿದ್ದೇನು?
ಒಂದು ವೇಳೆ ಅಮೆರಿಕವು ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹೇರಿದ್ದೇ ಆದಲ್ಲಿ, ಒಮಾನ್ ಹಾಗೂ ಪರ್ಷಿಯಾ ಕೊಲ್ಲಿಯಾದ್ಯಂತ ಇರುವ ಯಾವುದೇ ಬಂದರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಇರಾನ್ ಸೇನೆ ಎಚ್ಚರಿಸಿದೆ. ಪರ್ಷಿಯಾ ಕೊಲ್ಲಿ ಮತ್ತು ಒಮಾನ್ ಸಮುದ್ರದ ಭದ್ರತೆಯು ಎಲ್ಲರಿಗೂ ಸೇರಬೇಕು, ಇಲ್ಲವಾದರೆ ಅದು ಯಾರೊಬ್ಬರಿಗೂ ಇರುವುದಿಲ್ಲ ಎಂದು ಇರಾನ್ ಸೇನೆ ಗುಡುಗಿದೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ. ಇದು ಸಮುದ್ರ ಮಾರ್ಗದಲ್ಲಿ ಸಂಭವಿಸಲಿರುವ ದೊಡ್ಡ ಮಟ್ಟದ ಅನಾಹುತದ ಮುನ್ಸೂಚನೆಯಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಕಠಿಣ ನಿಲುವು ತಳೆದಿದ್ದರು. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ತಕ್ಷಣದಿಂದಲೇ ದಿಗ್ಬಂಧನ ವಿಧಿಸಲಾಗುವುದು. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗಲು ಇರಾನ್‌ಗೆ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ತಡೆಯಲಾಗುವುದು ಎಂದು ಹೇಳಿದ್ದರು. ಇರಾನ್ ಅನ್ನು ಆರ್ಥಿಕವಾಗಿ ಹತ್ತಿಕ್ಕಲು ಅಮೆರಿಕ ಈ ತಂತ್ರ ಹೂಡಿತ್ತು.
ಜಾಸ್ತಿ ಆಗಲಿದೆಯಾ ಯುದ್ಧ?
ವಿಶ್ವದ ಒಟ್ಟು ತೈಲ ಪೂರೈಕೆಯ ಸಿಂಹಪಾಲು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈಗ ಸೌದಿ ಅರೇಬಿಯಾ, ಯುಎಇ ಸೇರಿದಂತೆ ಅರಬ್ ರಾಷ್ಟ್ರಗಳ ಬಂದರುಗಳ ಮೇಲೆ ದಾಳಿ ನಡೆಸುವ ಪರೋಕ್ಷ ಎಚ್ಚರಿಕೆ ನೀಡಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದೆ. ಬಂದರುಗಳು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂಬ ಇರಾನ್ ಹೇಳಿಕೆಯು ಕೇವಲ ಅಮೆರಿಕಕ್ಕೆ ಮಾತ್ರವಲ್ಲದೆ, ಜಾಗತಿಕ ವಾಣಿಜ್ಯ ವ್ಯವಹಾರಗಳಿಗೂ ದೊಡ್ಡ ಬೆದರಿಕೆಯಾಗಿದೆ. ಈಗಾಗಲೇ ಮಾತುಕತೆಗಳು ಹಳಿ ತಪ್ಪಿರುವುದರಿಂದ, ಉಭಯ ದೇಶಗಳ ನಡುವಿನ ಈ ವಾಕ್ಸಮರವು ಶೀಘ್ರದಲ್ಲೇ ಪೂರ್ಣ ಪ್ರಮಾಣದ ನೌಕಾ ಸಮರಕ್ಕೆ ನಾಂದಿ ಹಾಡಲಿದೆಯೇ ಎಂಬ ಆತಂಕ ಜಗತ್ತನ್ನು ಆವರಿಸಿದೆ.
ಇದನ್ನೂ ಓದಿ: ನಮ್ಮ ಹತ್ರ ಇರುವ ತೈಲವನ್ನ ಯಾವುದೇ ದೇಶಕ್ಕೂ ಮಾರಾಟ ಮಾಡಲು ಸಿದ್ದ ಎಂದ ಇರಾನ್