ಟೆಹ್ರಾನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿರುವ ಮೊಜ್ತಾಬಾ ಖಮೇನಿ (Mojtaba Khamenei) ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಮೇಲಾದ ಎರಡು ದಾಳಿಗಳಿಂದ (Attacks) ಬದುಕುಳಿದಿದ್ದಾರೆ ಎಂದು ಇರಾನ್ ಸಂಸತ್ತಿನ ಸದಸ್ಯರೊಬ್ಬರನ್ನು (Iran MP) ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಯಾದ ‘ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ’ (IRNA) ಜೊತೆ ಮಾತನಾಡಿದ ಸಂಸದ ಮೊಹಮ್ಮದ್ರೆಜಾ ರೇಜಾಯಿ ಕೂಚಿ, ದೇಶದ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿವಾಸದ ಮೇಲೆ ದಾಳಿ ನಡೆದ ಸಮಯದಲ್ಲಿ ಮೊಜ್ತಾಬಾ ಖಮೇನಿ ಅವರು ಅಲಿ ಖಮೇನಿ ಅವರೊಂದಿಗೆ ಅದೇ ಸ್ಥಳದಲ್ಲಿದ್ದರು. ಆದರೆ ಅವರು ಈ ಅವಘಡದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದ್ದಾರೆ.
ಮೊಜ್ತಾಬಾ ಖಮೇನಿ ಅವರು ಇದ್ದ ಆಸ್ಪತ್ರೆಯೊಂದರ ಮೇಲೆಯೂ ಮತ್ತೊಂದು ದಾಳಿ ನಡೆಸಲಾಗಿದೆ ಎಂದು ಸಂಸದರು ಆರೋಪಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಯನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ಹೇಳಿದ್ದಾರೆ. ಆದರೆ ಈ ದಾಳಿ ನಡೆದ ಆಸ್ಪತ್ರೆಯ ಹೆಸರು ಅಥವಾ ನಿಖರವಾದ ಸ್ಥಳದ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ : ಕಾಲು ಕಳೆದುಕೊಂಡು ಕೋಮಾದಲ್ಲಿ ಖಮೇನಿ? – ಡೊನಾಲ್ಡ್ ಟ್ರಂಪ್ ಸ್ಪಷ್ಟನೆ
ಇದೇ ವೇಳೆ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಆರಂಭಿಕ ಹಂತದ ದಾಳಿಗಳ ಸಮಯದಲ್ಲಿ ಇರಾನ್‌ನ ನೂತನ ನಾಯಕ ಗಾಯಗೊಂಡಿರಬಹುದು ಎಂದು ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.
ಫಾಕ್ಸ್ ನ್ಯೂಸ್ ರೇಡಿಯೋ ನಿರೂಪಕ ಬ್ರಿಯಾನ್ ಕಿಲ್ಮೀಡ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಅವರು ಬಹುಶಃ ಗಾಯಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಹಾನಿಯಾಗಿದೆ, ಆದರೆ ಅವರು ಹೇಗೋ ಬದುಕುಳಿದಿದ್ದಾರೆ ಎನಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ 56 ವರ್ಷದ ಮಗ ತೀವ್ರ ಗಾಯಗೊಂಡಿದ್ದಾರೆ ಮತ್ತು ಪ್ರಸ್ತುತ ಟೆಹ್ರಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ವರದಿ ಮಾಡಿತ್ತು. ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ, ಅವರ ಹೊಟ್ಟೆ, ಲಿವರ್ಗೆ ಗಂಭೀರ ಹಾನಿಯಾಗಿದೆ ಎಂದು ಹೇಳಿತ್ತು.
ಮೊಜ್ತಾಬಾ ಖಮೇನಿ ಅವರು ಗುರುವಾರ ತಮ್ಮ ಮೊದಲ ಸಾರ್ವಜನಿಕ ಸಂದೇಶವನ್ನು ಹೊರಡಿಸಿದ್ದಾರೆ. ಆದರೆ ಸುಮಾರು ಒಂದು ವಾರದ ಹಿಂದೆ ಅವರು ಅಧಿಕಾರ ವಹಿಸಿಕೊಂಡ ನಂತರ ಅವರ ಯಾವುದೇ ಭಾವಚಿತ್ರ ಅಥವಾ ವಿಡಿಯೋ ರೆಕಾರ್ಡಿಂಗ್‌ಗಳು ಬಿಡುಗಡೆಯಾಗಿಲ್ಲ. ಇದು ಅವರ ಆರೋಗ್ಯ ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.