ವಾಷಿಂಗ್ಟನ್: ಅಮೆರಿಕದ ಭೀಕರ ದಾಳಿಯಿಂದ ಕಂಗೆಟ್ಟಿರುವ ಇರಾನ್ (America-Iran) ತೀವ್ರ ಮುಖಭಂಗ ಅನುಭವಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಹೇಳಿದ್ದಾರೆ.
‘ಆಪರೇಷನ್ ಎಪಿಕ್ ಫ್ಯೂರಿ‘
ಬುಧವಾರ ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್‌ನ ಮಿಲಿಟರಿ ಶಕ್ತಿ ಮತ್ತು ನಾಯಕತ್ವ ಸಂಪೂರ್ಣವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಬೇರೆ ದಾರಿಯಿಲ್ಲದೆ ಆ ದೇಶ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ಫೆಬ್ರವರಿ 28 ರಿಂದ ಆರಂಭವಾದ ‘ಆಪರೇಷನ್ ಎಪಿಕ್ ಫ್ಯೂರಿ‘ ಮೂಲಕ ಅಮೆರಿಕವು ಇರಾನ್ ಮೇಲೆ ನಿರ್ಣಾಯಕ ಮಿಲಿಟರಿ ವಿಜಯ ಸಾಧಿಸಿದೆ. ಕೇವಲ ಒಂದು ರಾತ್ರಿಯಲ್ಲಿ ಅಮೆರಿಕದ ಪಡೆಗಳು ಇರಾನ್‌ನ 800 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ್ದು, ಆ ದೇಶದ ರಕ್ಷಣಾ ಕೈಗಾರಿಕಾ ಮೂಲಸೌಕರ್ಯಗಳನ್ನು ನೆಲಸಮಗೊಳಿಸಿವೆ. ಈ ದಾಳಿಯಿಂದಾಗಿ ಇರಾನ್‌ನ ಕ್ಷಿಪಣಿ ಯೋಜನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಇನ್ಮುಂದೆ ಆ ದೇಶಕ್ಕೆ ಕ್ಷಿಪಣಿಗಳು, ರಾಕೆಟ್‌ಗಳು ಅಥವಾ ಡ್ರೋನ್‌ಗಳನ್ನು ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಗ್ಸೆತ್ ವಿವರಿಸಿದ್ದಾರೆ.
ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಹೆಗ್ಸೆತ್ ಬಹಿರಂಗಪಡಿಸಿದ್ದಾರೆ. ಇರಾನ್‌ನ ಇಡೀ ನಾಯಕತ್ವವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗಿದೆ ಮತ್ತು ಇರಾನ್ ಇನ್ನು ಮುಂದೆ ಎಂದಿಗೂ ಪರಮಾಣು ಅಸ್ತ್ರವನ್ನು ಹೊಂದಲು ಸಾಧ್ಯವಾಗದಂತೆ ಅಮೆರಿಕ ಖಚಿತಪಡಿಸಿಕೊಂಡಿದೆ. ಇರಾನ್‌ನ ಭವಿಷ್ಯ ಈಗ ಅಮೆರಿಕದ ಕೈಯಲ್ಲಿದೆ, ಇದೇ ಕಾರಣಕ್ಕೆ ಅವರು ಮಾತುಕತೆಗೆ ಬರಬೇಕಾಯಿತು ಎಂದು ಅವರು ಹೇಳಿದ್ದಾರೆ.
ಹರ್ಮೂಜ್ ಜಲಸಂಧಿ ಮುಕ್ತಗೊಳಿಸಿದ ಇರಾನ್
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿರುವ ಈ ಎರಡು ವಾರಗಳ ಕದನ ವಿರಾಮವು ಕೇವಲ ತಾತ್ಕಾಲಿಕವಾಗಿದ್ದು, ಇರಾನ್ ನಿಯಮಗಳನ್ನು ಉಲ್ಲಂಘಿಸಿದರೆ ಅಮೆರಿಕ ಪಡೆಗಳು ಮತ್ತೆ ದಾಳಿ ನಡೆಸಲು ಸಜ್ಜಾಗಿವೆ. ಸದ್ಯ ಹರ್ಮೂಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗಿದ್ದು, ಇರಾನ್ ಕದನ ವಿರಾಮದ ನಿಯಮಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ಗಮನಿಸಲು ಅಮೆರಿಕದ ಪಡೆಗಳು ಮಧ್ಯಪ್ರಾಚ್ಯದಲ್ಲಿ ಬೀಡುಬಿಟ್ಟಿರಲಿವೆ. ಇತ್ತ ಇರಾನ್ ಜೊತೆ ಕದನ ವಿರಾಮ ಘೋಷಣೆಯಾಗಿದ್ದರೂ, ಇಸ್ರೇಲ್ ಮಾತ್ರ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಈ ಕದನ ವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಇರಾನ್ ಸರ್ವನಾಶದ ಹೇಳಿಕೆ, ಟ್ರಂಪ್‌ಗೆ ಅಮೆರಿಕಾದಲ್ಲೇ ಶುರುವಾಯ್ತು ವಿರೋಧ!