ಜೆರುಸಲೆಂ: ಇರಾನ್ (Iran) ಮತ್ತು ಲೆಬನಾನ್ (Lebanon) ಮೂಲದ ಹಿಜ್ಬುಲ್ಲಾ (Hezbollah) ಸಂಘಟನೆಗಳು ಇಸ್ರೇಲ್ (Israel) ಮೇಲೆ ಜಂಟಿ ಕ್ಷಿಪಣಿ ದಾಳಿ (Missile Attack ) ನಡೆಸಿದ್ದು, 100ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿವೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ದಾಳಿಗಳಿಂದಾಗಿ ಉತ್ತರ ಇಸ್ರೇಲ್‌ನ ಹೈಫಾ ಮತ್ತು ಎಕ್ರೆ ಸೇರಿದಂತೆ ಹಲವು ನಗರಗಳಲ್ಲಿ ಎಚ್ಚರಿಕೆಯ ಸೈರನ್‌ಗಳು ಮೊಳಗಿದವು. ಈ ಸಂದರ್ಭದಲ್ಲಿ ನಿವಾಸಿಗಳು ರಕ್ಷಣೆಗಾಗಿ ಸುರಕ್ಷಿತ ಆಶ್ರಯ ತಾಣಗಳತ್ತ ಧಾವಿಸಿದರು.
ಅದೇ ಸಮಯದಲ್ಲಿ, ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಲೆಬನಾನ್‌ನಿಂದ ಬಂದ ರಾಕೆಟ್‌ಗಳನ್ನು ತಡೆದು ಹೊಡೆದುರುಳಿಸಿದಾಗ, ಇಸ್ರೇಲ್‌ನ ನಜರೆತ್ ನಗರದ ಉತ್ತರ ಭಾಗದ ಆಕಾಶವು ಹತ್ತಾರು ಸ್ಫೋಟಗಳಿಂದ ಬೆಳಗಿತು. ಕೆಲವು ಕ್ಷಿಪಣಿಗಳು ಭೂಮಿಗೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ.
Northen israel after Hezbullah missile attack . pic.twitter.com/V4lcdW1TGV
— Maryam PTI 🇵🇰 (@pakistanii32) March 11, 2026
ದ ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಮೊದಲ ದಾಳಿಯ ನಂತರ ಕೆಲವು ಗಂಟೆಗಳಲ್ಲಿ ಹಿಜ್ಬುಲ್ಲಾ ಉಗ್ರರು ಮತ್ತೆ ಹತ್ತಾರು ರಾಕೆಟ್‌ಗಳನ್ನು ಉಡಾಯಿಸಿದ್ದಾರೆ. ಇದರೊಂದಿಗೆ ಕಳೆದ ಕೆಲವು ಗಂಟೆಗಳಲ್ಲಿ ಉತ್ತರ ಇಸ್ರೇಲ್ ಮೇಲೆ ಒಟ್ಟು ಉಡಾಯಿಸಲಾದ ಕ್ಷಿಪಣಿಗಳ ಸಂಖ್ಯೆ ಸುಮಾರು 150ಕ್ಕೆ ಏರಿದೆ. ಈ ಅಂಕಿ-ಅಂಶವು ಇಸ್ರೇಲ್ ಸೇನೆಯ ಮೌಲ್ಯಮಾಪನಗಳನ್ನು ಆಧರಿಸಿದೆ.
ಇರಾನ್ ಮತ್ತು ಹಿಜ್ಬುಲ್ಲಾ ಜಂಟಿಯಾಗಿ ನಡೆಸಿದ ಈ ದಾಳಿಯ ಬಗ್ಗೆ ಇಸ್ರೇಲ್‌ನ ಹಿರಿಯ ರಕ್ಷಣಾ ಅಧಿಕಾರಿ ಪ್ರತಿಕ್ರಿಯಿಸಿ, ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ವಿರುದ್ಧ ನಡೆದ ಮೊದಲ ಸಂಘಟಿತ ಕ್ರಮ ಇದಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಇಸ್ರೇಲ್‌ನ ಆಕಾಶದಲ್ಲಿ ರಾಕೆಟ್‌ಗಳು ಬೆಳಗುತ್ತಿರುವುದು ಮತ್ತು ಅವುಗಳಲ್ಲಿ ಕೆಲವು ನೆಲಕ್ಕೆ ಅಪ್ಪಳಿಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಖಚಿತವಾಗಿಲ್ಲ.
ವರದಿಗಳ ಪ್ರಕಾರ, ರಾಕೆಟ್‌ಗಳು ಕೇಂದ್ರ ಇಸ್ರೇಲ್‌ಗೂ ತಲುಪಿವೆ. ಗುಶ್ ದಾನ್ ಮೆಟ್ರೋಪಾಲಿಟನ್ ಪ್ರದೇಶ, ಟೆಲ್ ಅವಿವ್, ಜೆರುಸಲೇಂ ಮತ್ತು ಇತರ ಸ್ಥಳಗಳಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗಿದವು. ಲೆಬನಾನ್‌ನಿಂದ ರಾಕೆಟ್‌ಗಳನ್ನು ಉಡಾಯಿಸುತ್ತಿರುವುದು ಪತ್ತೆಯಾದ ನಂತರ ಈ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ವಾಯು ರಕ್ಷಣಾ ವ್ಯವಸ್ಥೆಗಳು ಈ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆದು ಹೊಡೆದುರುಳಿಸಲು ಪ್ರಯತ್ನಿಸಿದವು.