ಇರಾನ್ : ಯೆಮನ್‌ನ (Yemen) ಹೌತಿ ಬಂಡುಕೋರರು (Houthi rebels) ಕೆಂಪು ಸಮುದ್ರದ (Red sea) ಪ್ರಮುಖ ವಾಣಿಜ್ಯ ಮಾರ್ಗವಾದ ಬಾಬ್ ಅಲ್-ಮಂದೇಬ್ ಜಲಸಂಧಿಯನ್ನು (Strait of Bab al-Mandeb) ಮುಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು ಶಾಂತಿ ಸ್ಥಾಪನೆಗೆ ಅಡ್ಡಿಯಾಗುತ್ತಿವೆ ಎಂದು ಆರೋಪಿಸಿರುವ ಹೌತಿ ನಾಯಕರು, ಒಂದು ವೇಳೆ ಈ ಮಾರ್ಗವನ್ನು ಬಂದ್ ಮಾಡಿದರೆ ಜಾಗತಿಕ ತೈಲ ಪೂರೈಕೆ ಮತ್ತು ವಾಣಿಜ್ಯ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಅನುಮತಿ ಕೊಟ್ಟು, ಈಗ ಗುಂಡು ಹಾರಿಸುತ್ತಿದ್ದೀರಿ, ಹಾರ್ಮುಜ್ ದಾಳಿಯ ವೇಳೆ ಭಾರತೀಯ ಹಡಗಿನ ಆಡಿಯೋ ಬಹಿರಂಗ
ಈಗಾಗಲೇ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಹೌತಿಗಳ ಈ ನಡೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರಕ್ಕೆ ಈ ಜಲಸಂಧಿ ಅತ್ಯಂತ ನಿರ್ಣಾಯಕವಾಗಿದ್ದು, ದಿನನಿತ್ಯ ಲಕ್ಷಾಂತರ ಬ್ಯಾರೆಲ್ ತೈಲ ಇಲ್ಲಿಂದ ಹಾದುಹೋಗುತ್ತದೆ. ಹೌತಿಗಳ ಈ ಬೆದರಿಕೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.
ಯೆಮನ್ ಸರ್ಕಾರದ ವಿದೇಶಾಂಗ ಸಚಿವರು ಈ ಬೆಳವಣಿಗೆಯನ್ನು ಖಂಡಿಸಿದ್ದು, ಹೌತಿಗಳು ಇರಾನ್‌ನ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಮತ್ತು ಇದು ಅಂತರಾಷ್ಟ್ರೀಯ ಭದ್ರತೆಗೆ ಒಡ್ಡಿರುವ ನೇರ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಆಯಕಟ್ಟಿನ ಜಲಸಂಧಿಯನ್ನು ಬಲವಂತವಾಗಿ ಮುಚ್ಚಲು ಪ್ರಯತ್ನಿಸಿದರೆ, ಅದನ್ನು ಎದುರಿಸಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಕಠಿಣ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಬಿಕ್ಕಟ್ಟು ಜಾಗತಿಕ ಸಮುದ್ರ ಯಾನದ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದ್ದು, ವಿಶ್ವಸಂಸ್ಥೆಯ ಮಧ್ಯಸ್ಥಿಕೆಗಾಗಿ ಒತ್ತಾಯ ಕೇಳಿಬರುತ್ತಿದೆ.