ನವದೆಹಲಿ/ಇಸ್ಲಾಮಾಬಾದ್: ಅಮೆರಿಕ (America) ಮತ್ತು ಇರಾನ್ (Iran) ನಡುವೆ ನಡೆಯುತ್ತಿರುವ ಯುದ್ಧದಂತಹ (War) ಪರಿಸ್ಥಿತಿಯನ್ನು ತಣ್ಣಗಾಗಿಸಲು ಪಾಕಿಸ್ತಾನವು (Pakistan) ದೂತನ ಪಾತ್ರ ನಿರ್ವಹಿಸುತ್ತಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಅಮೆರಿಕದ ಪ್ರಮುಖ ಸಂದೇಶವೊಂದನ್ನು ಹೊತ್ತು ಪಾಕಿಸ್ತಾನದ ಉನ್ನತ ಮಟ್ಟದ ನಿಯೋಗವೊಂದು ಇರಾನ್‌ಗೆ ಭೇಟಿ ನೀಡುತ್ತಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಮೊದಲ ಹಂತದ ಮಾತುಕತೆ ನಡೆದಿತ್ತು. ಆದರೆ, ಆ ಸಭೆಯಲ್ಲಿ ಯಾವುದೇ ನಿರ್ಣಾಯಕ ತೀರ್ಮಾನಗಳು ಹೊರಬಂದಿರಲಿಲ್ಲ. ಇದೀಗ ಪಾಕಿಸ್ತಾನಿ ನಿಯೋಗವು ಇರಾನ್‌ಗೆ ಭೇಟಿ ನೀಡುತ್ತಿರುವುದು ಎರಡನೇ ಹಂತದ ಮಾತುಕತೆಗೆ ವೇದಿಕೆ ಸಿದ್ಧಪಡಿಸುವ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕಾಯಿ ಅವರು ಪಾಕಿಸ್ತಾನಿ ನಿಯೋಗದ ಭೇಟಿಯನ್ನು ಖಚಿತಪಡಿಸಿದ್ದು, ಚರ್ಚೆಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇರಾನ್ ಮೇಲಿನ ಅಮೆರಿಕದ ದಿಗ್ಬಂಧನದ ನಡುವೆ ಗುಜರಾತ್ ತಲುಪಿದ ಭಾರತೀಯ ಅನಿಲ ನೌಕೆ
ಇಸ್ಲಾಮಾಬಾದ್ ಮಾತುಕತೆಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮೂಲಕ ಹಲವಾರು ಸಂದೇಶಗಳು ವಿನಿಮಯವಾಗಿವೆ. ಆದರೆ, ಮಾತುಕತೆಯ ವೇಳೆ ಅಮೆರಿಕ ಮಂಡಿಸಿದ ಕೆಲವು ಬೇಡಿಕೆಗಳು ಅಸಮಂಜಸ ಮತ್ತು ಅವಾಸ್ತವಿಕ ಎಂದು ಇರಾನ್ ವಕ್ತಾರ ಬಕಾಯಿ ಹೇಳಿದ್ದಾರೆ. ಅಮೆರಿಕದ ಕೆಲವು ಕಠಿಣ ನಿಲುವುಗಳು ಒಮ್ಮತಕ್ಕೆ ಬರುವುದಕ್ಕೆ ಅಡ್ಡಿಯಾಗಿವೆ ಎಂಬ ಸುಳಿವನ್ನು ಇರಾನ್ ನೀಡಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚಾದರೆ ಅದರ ನೇರ ಪರಿಣಾಮ ನೆರೆಹೊರೆಯ ರಾಷ್ಟ್ರಗಳ ಮೇಲಾಗುವುದರಿಂದ, ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ಎರಡೂ ರಾಷ್ಟ್ರಗಳನ್ನು ಒಪ್ಪಂದಕ್ಕೆ ತರಲು ಪ್ರಯತ್ನಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ನಿಲುವು ಮತ್ತು ಇರಾನ್‌ನ ಪ್ರತ್ಯುತ್ತರಗಳ ನಡುವೆ ಮಧ್ಯಮ ಹಾದಿಯನ್ನು ಕಂಡುಕೊಳ್ಳುವುದು ಪಾಕಿಸ್ತಾನಕ್ಕೆ ದೊಡ್ಡ ಸವಾಲಾಗಿದೆ.
ಯುದ್ಧದ ಭೀತಿ ಮತ್ತು ಜಾಗತಿಕ ಆತಂಕ
ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವೆ ನೇರ ಸಂಘರ್ಷದ ಭೀತಿ ಎದುರಾಗಿದ್ದು, ಇದು ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಇರಾನ್‌ನ ಇಂಟರ್ನೆಟ್ ಸ್ಥಗಿತ ಮತ್ತು ಬಂದರುಗಳಲ್ಲಿನ ಮಂದಗತಿಯ ವ್ಯವಹಾರಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ನಿಯೋಗದ ಇರಾನ್ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಮುಂಬರುವ ಎರಡನೇ ಹಂತದ ಮಾತುಕತೆಯು ಈ ಬಿಕ್ಕಟ್ಟಿಗೆ ಒಂದು ಶಾಂತಿಯುತ ಅಂತ್ಯ ನೀಡುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜಾಗತಿಕ ರಾಜತಾಂತ್ರಿಕ ವಲಯವು ಈಗ ತೆಹ್ರಾನ್ ಕಡೆಗೆ ಚಿತ್ತ ನೆಟ್ಟಿದ್ದು, ಪಾಕಿಸ್ತಾನ ಹೊತ್ತು ತಂದಿರುವ ಅಮೆರಿಕದ ಸಂದೇಶಕ್ಕೆ ಇರಾನ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ನಿರ್ಣಾಯಕವಾಗಲಿದೆ.