ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಐಪಿಎಲ್ (IPL) ಪಂದ್ಯಗಳ ಅಬ್ಬರ ಜೋರಾಗಿದ್ದು, ಇದನ್ನೇ ಸಂಚನ್ನಾಗಿಸಿಕೊಂಡು ಟಿಕೆಟ್ ಗಳನ್ನು (Ipl ticket) ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು (CCB) ಭೇದಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಕ್ರಮವಾಗಿ ಟಿಕೆಟ್ ಮಾರಾಟಕ್ಕಿಳಿದಿದ್ದ 11 ಮಂದಿಯನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶ ಮೂಲದ ಸುಪ್ರಿಯಾ ಫಡ್ಕೆ, ಆಕೆಯ ಸ್ನೇಹಿತ ನಿತಿನ್ ಮತ್ತು ಮೋಹನ್ ಗೌಡ, ಯಾದಗಿರಿಯ ಮಂಜುನಾಥ್, ಪೀಣ್ಯದ ಪುನೀತ್ ಮತ್ತು ಲಿಖಿತ್, ನೆಲಮಂಗಲದ ಹರ್ಷಾ ರವಿ, ವಿನಯ್ ಗೌಡ, ಜಗದೀಶ್, ಸತ್ಯನಾರಾಯಣ ಹಾಗೂ ದಿನೇಶ್ ರಾವ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳಲ್ಲಿ ಬಹುತೇಕರು ಖಾಸಗಿ ಕಂಪನಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಸುಲಭವಾಗಿ ಹಣ ಸಂಪಾದಿಸುವ ಆಸೆಗೆ ಬಿದ್ದು ಈಗ ಜೈಲು ಪಾಲಾಗಿದ್ದಾರೆ.
ಕಳೆದ ಭಾನುವಾರ ನಡೆದ ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ಹೈ-ವೋಲ್ಟೇಜ್ ಪಂದ್ಯದ ವೇಳೆ ಈ ದಂಧೆ ಸಕ್ರಿಯವಾಗಿತ್ತು. ಆನ್ಲೈನ್ ನಲ್ಲಿ ಒಬ್ಬರು ಗರಿಷ್ಠ 4 ಟಿಕೆಟ್ ಗಳನ್ನು ಖರೀದಿಸಿ, ಅದನ್ನು ಬೇರೆಯವರ ಹೆಸರಿಗೆ ವರ್ಗಾಯಿಸುವ ತಾಂತ್ರಿಕತೆಯನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದರು.
ಲಿಂಕ್ ಶೇರ್ ಮಾಡಿ ಓಟಿಪಿ ಬಳಸುವ ಮೂಲಕ ಟಿಕೆಟ್ ಪಡೆದುಕೊಳ್ಳುತ್ತಿದ್ದ ಇವರು, ಕ್ರೀಡಾಂಗಣದ ಬಳಿ ಟಿಕೆಟ್ ಸಿಗದೆ ನಿಂತಿದ್ದ ಅಪ್ಪಟ ಕ್ರಿಕೆಟ್ ಅಭಿಮಾನಿಗಳಿಗೆ ತಲಾ 10 ರಿಂದ 20 ಸಾವಿರ ರೂಪಾಯಿವರೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, ಬಂಧಿತರಿಂದ 28 ಟಿಕೆಟ್ಗಳು ಹಾಗೂ 8 ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟು 4.53 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಳೆದ ಪಂದ್ಯದ ವೇಳೆ ಕ್ರೀಡಾಂಗಣದ ಬಳಿ ಸುಮಾರು 75 ಮೊಬೈಲ್ಗಳನ್ನು ಕಳವು ಮಾಡಿದ್ದ ಜಾರ್ಖಂಡ್ ಮೂಲದ ಗ್ಯಾಂಗ್ ಅನ್ನು ಕಬ್ಬನ್ ಪಾರ್ಕ್ ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ಆ ಘಟನೆಯ ಬೆನ್ನಲ್ಲೇ ಈಗ ಕಾಳಸಂತೆಕೋರರು ಸಿಸಿಬಿ ಬಲೆಗೆ ಬಿದ್ದಿರುವುದು ಕ್ರೀಡಾಂಗಣದ ಸುತ್ತಮುತ್ತಲ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಮಾಡಿದೆ.
ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದು, ಅಭಿಮಾನಿಗಳು ಅಧಿಕೃತ ಮೂಲಗಳಿಂದಲೇ ಟಿಕೆಟ್ ಖರೀದಿಸುವಂತೆ ಮನವಿ ಮಾಡಿದ್ದಾರೆ.