ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಹಿರಿಯ ಗೊರಿಲ್ಲಾ (Gorilla) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಫಾಟೋ ಈಗ ತನ್ನ 69ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ನಾಲ್ಕು ತಲೆಮಾರುಗಳನ್ನು (Interesting Facts) ಕಂಡಿರುವ ಈ ‘ಸೂಪರ್ ಅಜ್ಜಿ’ಯ ಬರ್ತ್‌ಡೇ ಪಾರ್ಟಿ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ.
ಫಾಟೋ ಮೃಗಾಲಯಕ್ಕೆ ಬಂದ ಕತೆ ಕೇಳಿದರೆ ನೀವು ದಂಗಾಗೋದು ಗ್ಯಾರಂಟಿ. 1959ರಲ್ಲಿ ಒಬ್ಬ ಫ್ರೆಂಚ್ ನಾವಿಕ ಹೋಟೆಲ್‌ನಲ್ಲಿ ಮನಸೋ ಇಚ್ಛೆ ಊಟ ಮಾಡಿ, ಬಿಲ್ ಕಟ್ಟಲು ಕಾಸಿಲ್ಲದಿದ್ದಾಗ ತನ್ನ ಚೀಲದಲ್ಲಿದ್ದ ಪುಟ್ಟ ಫಾಟೋಳನ್ನು ಹೋಟೆಲ್ ಮಾಲೀಕನ ಕೈಗೆ ಇಟ್ಟು ಹೋದವನು ಮತ್ತೆ ಮರಳಲೇ ಇಲ್ಲ.
ಹಾಗೆ ಹೋಟೆಲ್ ಬಿಲ್ ಬದಲಿಗೆ ಮನುಷ್ಯರ ಕೈ ಸೇರಿದ ಫಾಟೋ, ನಂತರ ಪ್ರಾಣಿ ವ್ಯಾಪಾರಿಗಳ ಮೂಲಕ ಜರ್ಮನಿಗೆ ಬಂದು ಮೃಗಾಲಯದ ‘ಮಹಾರಾಣಿ’ಯಾದಳು. ಅಂದು ಹೋಟೆಲ್ ಬಿಲ್ ಆಗಿದ್ದವಳು ಇಂದು ಇಡೀ ಮೃಗಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯ ತರುವ ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಳೆ.
ಫಾಟೋಗೆ ಈಗ ಹಲ್ಲುಗಳೆಲ್ಲ ಉದುರಿ ಹೋಗಿದ್ದರೂ, ಅಜ್ಜಿಯ ದರ್ಬಾರ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಹಣ್ಣುಗಳ ಸಿಹಿ ಜಾಸ್ತಿಯಾದರೆ ಅಜ್ಜಿಗೆ ಸಕ್ಕರೆ ಕಾಯಿಲೆ (ಡಯಾಬಿಟಿಸ್) ಬರಬಹುದು ಎಂಬ ಆತಂಕದಲ್ಲಿ ಮೃಗಾಲಯದ ವೈದ್ಯರು ಪೌಷ್ಟಿಕ ತರಕಾರಿಗಳ ‘ಡಯಟ್ ಫುಡ್’ ನೀಡುತ್ತಿದ್ದಾರೆ.
ಈ ಬಾರಿಯ ಬರ್ತ್‌ಡೇಗೆ ಬೀಟ್‌ರೂಟ್ ಮತ್ತು ಟೊಮೆಟೊಗಳ ಹಸಿರು ಹೂವಿನ ಗುಚ್ಛದ ಜೊತೆಗೆ ರಸದೂಟವನ್ನು ಸವಿಯುತ್ತಿರುವ ಅಜ್ಜಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
2024 ರಲ್ಲಿ ಇಂಗೊ ಫ್ಲೆಮಿಂಗೊದ ಮರಣದ ನಂತರ, ಫಟೌ ಮೃಗಾಲಯದ ಅತ್ಯಂತ ಹಿರಿಯ ನಿವಾಸಿಯಾದರು. ಈ ಹಕ್ಕಿಗೆ ಕನಿಷ್ಠ 75 ವರ್ಷ ವಯಸ್ಸಾಗಿತ್ತು ಎಂದು ನಂಬಲಾಗಿದೆ ಮತ್ತು 1955 ರಿಂದ ಮೃಗಾಲಯದಲ್ಲಿ ವಾಸಿಸುತ್ತಿತ್ತು.
ಫಾಟೋ ಕೇವಲ ವಯಸ್ಸಿನಲ್ಲಿ ದೊಡ್ಡವಳಲ್ಲ, ಸಂಸಾರದಲ್ಲೂ ದೊಡ್ಡವಳೇ. 1974ರಲ್ಲಿ ಈಕೆ ಮರಿಯನ್ನು ಹಾಕುವ ಮೂಲಕ ಮೃಗಾಲಯದಲ್ಲಿ ಇತಿಹಾಸ ಬರೆದಿದ್ದಳು. ಇಂದು ಈಕೆಗೆ ಮರಿಗಳು, ಮೊಮ್ಮಕ್ಕಳು, ಮರಿ-ಮೊಮ್ಮಕ್ಕಳು ಸೇರಿದಂತೆ ಮೂರು ತಲೆಮಾರುಗಳ ದೊಡ್ಡ ಸೈನ್ಯವೇ ಇದೆ.
ವಿಶ್ವದ ಹಿರಿಯ ಗೊರಿಲ್ಲಾ ಹುಟ್ಟುಹಬ್ಬ ಆಚರಣೆ ನೋಡಿ#gorilla #celebrate #birthday #videoviral #KannadaNews #navasamajanews pic.twitter.com/ut0ubGCpmn
— navasamaja (@navasamajanews) April 15, 2026
2019ರಲ್ಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದ ಫಾಟೋ, ಇಂದು ಅಳಿವಿನ ಅಂಚಿನಲ್ಲಿರುವ ಗೊರಿಲ್ಲಾ ತಳಿಗೆ ಒಂದು ಜೀವಂತ ದೈವದಂತಿದ್ದಾಳೆ. 69ರ ಹರೆಯದಲ್ಲೂ ಫಾಟೋಳ ಗತ್ತು-ಗೈರತ್ತು ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

