ನಮ್ಮ ದೇಶದ ಹೈವೇಗಳಲ್ಲಿ ಜಬರ್ದಸ್ತ್ ಆಗಿ ಹಾರ್ನ್ ಹಾಕುತ್ತಾ, ರಂಗುರಂಗಿನ ಲೈಟುಗಳನ್ನು ಮಿನುಗಿಸುತ್ತಾ ಸಾಗುವ ಲಾರಿಗಳನ್ನು (Truck) ನೋಡುವುದೇ ಒಂದು ಚಂದ. ಅದರಲ್ಲೂ (Interesting Facts) ಈ ದೇಶದ ಪ್ರತಿಯೊಬ್ಬ ಲಾರಿಯ ಬೆನ್ನ ಹಿಂದೆ ಕಣ್ಣಿಗೆ ರಾಚುವಂತೆ ದೊಡ್ಡದಾಗಿ ಬರೆದಿರುವ ಆ ಮೂರು ಅಕ್ಷರಗಳ ಮಂತ್ರವೇ ‘Horn OK Please’. ಕಲರ್‌ಫುಲ್ ಡಿಸೈನ್‌ಗಳ ಮಧ್ಯೆ ಮಿಂಚುವ ಈ ವಾಕ್ಯವನ್ನು ನಾವೆಲ್ಲಾ ದಿನಾಲೂ ನೋಡ್ತೀವಿ.
ಆದರೆ, ಈ ‘ಹಾರ್ನ್ ಓಕೆ ಪ್ಲೀಸ್’ ಅನ್ನೋ ಸಾಲಿನ ಹಿಂದೆ ಎಷ್ಟು ತಲೆ ಕೆಡಿಸುವಂತಹ ಕಥೆಗಳು, ಮಸಾಲಾ ಸಿದ್ಧಾಂತಗಳು ಇವೆ ಗೊತ್ತಾ? ಯಾರಿಗೂ ನಿಖರವಾಗಿ ಗೊತ್ತಿಲ್ಲದ ಆ ರೋಚಕ ರಹಸ್ಯಗಳ ಇಲ್ಲಿದೆ ನೋಡಿ..
ಸಿಂಗಲ್ ರೋಡ್ ಜಮಾನಾದ ಓವರ್‌ಟೆಕ್ ಗೇಮ್
ಅದು ಭಾರತದ ಹೆದ್ದಾರಿಗಳು ಇವತ್ತಿನ ತರಹ ಚಾಕೊಲೇಟ್ ಪೀಸ್‌ನಂತೆ ಅಗಲವಾಗಿ ಇರದಿದ್ದ ಕಾಲ. ಎತ್ತ ನೋಡಿದ್ರೂ ಕಿರಿದಾದ ಒಂದೇ ಪಥದ (ಸಿಂಗಲ್ ಲೇನ್) ರಸ್ತೆಗಳು. ಅಂತಹ ಕಾಲದಲ್ಲಿ ಗುಡ್ಡದ ತರಹ ಮುನ್ನುಗ್ಗುವ ಲಾರಿಯನ್ನು ಓವರ್‌ಟೆಕ್ ಮಾಡುವುದು ಅಂದ್ರೆ ಸಾಕ್ಷಾತ್ ಯಮನ ಜೊತೆ ಆಟ ಆಡಿದಂತೆ. ಹಾಗಾಗಿ, ಹಿಂದಿನ ಚಾಲಕ ‘ನಾನು ಮುನ್ನುಗ್ಗಲೇ?’ ಅಂತ ‘ಹಾರ್ನ್’ ಮಾಡಿದರೆ, ಲಾರಿ ಚಾಲಕ ಎದುರುಗಡೆ ರಸ್ತೆ ಕ್ಲಿಯರ್ ಇರುವುದನ್ನು ನೋಡಿ, ತನ್ನ ಲಾರಿಯ ಮೇಲಿದ್ದ ‘OK’ ಎಂಬ ಬಲ್ಬ್ ಅನ್ನು ಆನ್ ಮಾಡುತ್ತಿದ್ದ.
ಆ ಕೆಂಪು ಅಥವಾ ಹಸಿರು ಬಲ್ಬ್ ಉರಿದ ತಕ್ಷಣ ‘ಓಕೆ ಬಾಸ್, ರಸ್ತೆ ಖಾಲಿ ಇದೆ, ಪ್ಲೀಸ್ ಓವರ್‌ಟೆಕ್ ಮಾಡಿ’ ಅಂತ ಗ್ರೀನ್ ಸಿಗ್ನಲ್ ಸಿಕ್ಕಂತೆ. ಇವತ್ತು ರೋಡ್‌ಗಳೆಲ್ಲಾ ಸಿಕ್ಸ್-ಲೇನ್ ಆಗಿದ್ದರೂ, ಆ ಹಳೇ ನೆನಪಿನ ಸಂಪ್ರದಾಯ ಮಾತ್ರ ಇಂದಿಗೂ ಲಾರಿಗಳ ಹಿಂದೆ ಹಚ್ಚ ಹಸಿರಾಗಿದೆ.
ರೆಡಾರ್ ತರಹ ಕೆಲಸ ಮಾಡುತ್ತಿತ್ತಾ ‘OK’?
ಲಾರಿಯ ಹಿಂದೆ ಬರೆದಿರುವ ‘OK’ ಪದಕ್ಕೂ ಹಾರ್ನ್‌ಗೂ ಸಂಬಂಧವೇ ಇಲ್ಲ ಅನ್ನೋದು ಇನ್ನೊಂದು ಮಸ್ತ್ ಥಿಯರಿ. ಇದೊಂಥರಾ ಹಳೇ ಜಮಾನಾದ ಡಿಜಿಟಲ್ ಡಿಸ್ಟೆನ್ಸ್ ಇಂಡಿಕೇಟರ್. ಹಿಂದಿನಿಂದ ಬರುವ ಚಾಲಕನಿಗೆ ಲಾರಿಯ ಮೇಲಿರುವ ‘OK’ ಎಂಬ ಅಕ್ಷರಗಳು ಎಷ್ಟು ಸ್ಪಷ್ಟವಾಗಿ ಕಾಣಿಸುತ್ತವೆಯೋ, ಆತ ಅಷ್ಟು ಸುರಕ್ಷಿತ ದೂರದಲ್ಲಿದ್ದಾನೆ (Safe Distance) ಎಂದರ್ಥ. ಒಂದು ವೇಳೆ ಆ ಅಕ್ಷರಗಳು ಮಸುಕಾಗಿ ಅಥವಾ ತೀರಾ ಹತ್ತಿರ ಕಾಣಿಸಿದರೆ, ಬ್ರೇಕ್ ಹಾಕಲು ಜಾಗ ಸಾಲಲ್ಲ, ಸ್ವಲ್ಪ ಹಿಂದೆ ಇರು ಸ್ವಾಮಿ ಅಂತ ಎಚ್ಚರಿಸುವ ಸೈಕಲಾಜಿಕಲ್ ಗೇಮ್ ಇದಾಗಿತ್ತು.
‘OTK’ ಹೋಗಿ ‘OK’ ಆಗಿದ್ದು ಹೇಗೆ?
ಟ್ವಿಸ್ಟ್ ಅಂದ್ರೆ, ಮೊದಲಿಗೆ ಲಾರಿಗಳ ಹಿಂದೆ ಇದ್ದದ್ದು ‘OK’ ಅಲ್ಲವೇ ಅಲ್ಲ, ಅದು ‘OTK’ ಆಗಿತ್ತಂತೆ! ಅಂದರೆ ಇಂಗ್ಲಿಷ್‌ನಲ್ಲಿ ‘Overtake’ ಎಂಬುದರ ಶಾರ್ಟ್ ಫಾರ್ಮ್. ‘ಓವರ್‌ಟೆಕ್ ಮಾಡುವ ಮುನ್ನ ಹಾರ್ನ್ ಮಾಡಿ’ ಎಂದು ತಿಳಿಸಲು ಹಾರ್ನ್ ಚಿತ್ರದ ಪಕ್ಕದಲ್ಲೇ ‘OTK’ ಎಂದು ಬರೆಯಲಾಗುತ್ತಿತ್ತು.
ಆದರೆ ಲಾರಿಗಳ ಹಿಂಭಾಗದ ಹಲಗೆಗಳ ಕಟಿಂಗ್ಸ್ ಮತ್ತು ಡಿಸೈನ್ ಮಧ್ಯೆ ಆ ಇಂಗ್ಲಿಷ್‌ನ ‘T’ ಅಕ್ಷರ ಸಿಕ್ಕಿಹಾಕಿಕೊಂಡು, ಹಿಂದಿನ ಚಾಲಕರಿಗೆ ತಲೆ ತಿರುಗುವಂತೆ ಮಾಡುತ್ತಿತ್ತು. ಈ ಕನ್ಫ್ಯೂಷನ್ ಬೇಡ ಅಂತ ಕೊನೆಗೆ ‘T’ ಅಕ್ಷರಕ್ಕೆ ಕತ್ತರಿ ಹಾಕಿ ‘OK’ ಅಂತ ಸಿಂಪಲ್ ಮಾಡಿಬಿಟ್ಟರು.
ವಿಶ್ವಯುದ್ಧದ ಅಸಲಿ ಬಾಂಬ್ ಇಲ್ಲಿದೆ.
ಇವೆಲ್ಲಕ್ಕಿಂತ ಅತ್ಯಂತ ಡೇಂಜರಸ್ ಮತ್ತು ರೋಚಕ ಕಥೆ ಸಿಗುವುದು ಎರಡನೇ ಮಹಾಯುದ್ಧದ (1940 ರ ದಶಕ) ಪುಟಗಳಲ್ಲಿ. ಆ ಸಮಯದಲ್ಲಿ ಭಾರತದಲ್ಲಿ ಡೀಸೆಲ್‌ಗೆ ವಿಪರೀತ ಶಾರ್ಟೇಜ್ ಇತ್ತು. ಬದುಕು ಸಾಗಿಸಲು ಲಾರಿ ಮಾಲೀಕರು ಡೀಸೆಲ್ ಬದಲಿಗೆ ಸೀಮೆಎಣ್ಣೆ (Kerosene) ಬಳಸಿ ಇಂಜಿನ್ ಓಡಿಸಲು ಶುರು ಮಾಡಿದರು.
ಸೀಮೆಎಣ್ಣೆ ಅತಿಯಾದ ಜ್ವಲನಶೀಲ ಗುಣ ಹೊಂದಿದ್ದರಿಂದ, ಸಣ್ಣದೊಂದು ಟಚ್ ಆದರೂ ಸಾಕು, ಇಡೀ ಲಾರಿ ಬಾಂಬ್ ತರಹ ಬ್ಲಾಸ್ಟ್ ಆಗುತ್ತಿತ್ತು. ಅದಕ್ಕಾಗಿಯೇ ಹಿಂದಿನ ವಾಹನಗಳಿಗೆ ಎಚ್ಚರಿಕೆ ನೀಡಲು ‘On Kerosene’ ಎಂಬುದರ ಶಾರ್ಟ್ ಫಾರ್ಮ್ ಆಗಿ ‘O.K.’ ಎಂದು ದೊಡ್ಡದಾಗಿ ಬರೆಯುತ್ತಿದ್ದರು. ಅಂದರೆ ‘ನಮ್ಮ ಗಾಡಿಯಲ್ಲಿ ಸೀಮೆಎಣ್ಣೆ ಇದೆ, ಹಾರ್ನ್ ಮಾಡಿ ಜಾಗ್ರತೆಯಾಗಿ ಸೈಡ್ ತಗೋಳಿ’ ಅನ್ನೋದು ಅದರ ಅಂತರಾಳವಾಗಿತ್ತು.
ವಿಶ್ವಯುದ್ಧ ಮುಗಿದು, ಸೀಮೆಎಣ್ಣೆ ಕಾಲ ಹೋದರೂ ಈ ‘Horn OK Please’ ಮಾತ್ರ ಇವತ್ತಿಗೂ ಭಾರತೀಯ ಲಾರಿಗಳ ಖದರ್ ಮತ್ತು ಸ್ಟೈಲ್ ಸ್ಟೇಟ್‌ಮೆಂಟ್ ಆಗಿ ರಸ್ತೆಯ ಮೇಲೆ ರಾರಾಜಿಸುತ್ತಲೇ ಇದೆ.



