ನವದೆಹಲಿ: ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ ನೀಡಿದ್ದಾರೆ.ಜೋಶಿ ಮುಂದಿನ ಡಿಸೆಂಬರ್ 20 ರಿಂದ ಟೆಕ್ ಮಹೀಂದ್ರಾ ಕಂಪನಿಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಇನ್ಫೋಸಿಸ್ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದ್ದಾರೆ
2000 ಇಸವಿಯಲ್ಲಿ ಇನ್ಫೋಸಿಸ್‌ಗೆ ಸೇರಿದ್ದ ಜೋಶಿ ನಂತರ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಜೊತೆಗೆ ಯುರೋಪ್‌ನಲ್ಲಿ ಇನ್‌ಫೋಸಿಸ್‌ನ ಹಣಕಾಸು ಸೇವೆಗಳ ವ್ಯವಹಾರ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರು. 2007ರಲ್ಲಿ ಇನ್ಫೋಸಿಸ್ ಮೆಕ್ಸಿಕೋದ ಸಿಇಒ ಆಗಿ ನೇಮಕಗೊಂಡಿದ್ದ ಜೋಶಿ, ಲ್ಯಾಟಿನ್ ಅಮೆರಿಕಾದಲ್ಲಿ ಮೊದಲ ಅಂಗಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ಫೋಸಿಸ್ ಸಂಸ್ಥೆಯೂ ಸಹ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದು, ಜೋಶಿ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 1 ರಿಂದ ಅವರು ರಜೆಯಲ್ಲಿರಲಿದ್ದಾರೆ. ಜೂನ್ 9ಕ್ಕೆ ಅವರು ಸಂಸ್ಥೆಯಿಂದ ಹೊರನಡೆಯಲಿದ್ದಾರೆ ಎಂದು ನಿರ್ದೇಶಕರ ಮಂಡಳಿ ತಿಳಿಸಿದೆ.
ಮೋಹಿತ್ ಜೋಶಿ ಟೆಕ್ ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಾಗೂ ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ 5 ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಹಾಲಿ ಸಿಇಒ ಸಿ.ಪಿ ಗುರ್ನಾಸಿ ಅವರ ಅವಧಿ ಡಿಸೆಂಬರ್ 19ಕ್ಕೆ ಕೊನೆಗೊಳ್ಳಲಿದ್ದು, ನಂತರ ಜೋಶಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ.2023ರ ಡಿಸೆಂಬರ್ 20 ರಿಂದ ಜಾರಿಗೆ ಬರುವಂತೆ 2028ರ ಡಿಸೆಂಬರ್ 19 ರವರೆಗೆ ನೇಮಕ ಮಾಡಲಾಗಿದೆ’ ಎಂದು ಟೆಕ್ ಮಹೀಂದ್ರಾ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.