Monday, November 4, 2024
Homeಬೆಂಗಳೂರುಜ್ಞಾನಭಾರತಿ ಆವರಣದಲ್ಲಿ ಕಾಡುಪಾಪ ಪತ್ತೆ!

ಜ್ಞಾನಭಾರತಿ ಆವರಣದಲ್ಲಿ ಕಾಡುಪಾಪ ಪತ್ತೆ!

ವಿನಾಶದಂಚಿನಲ್ಲಿರುವ ವಾನರತಳಿ ಕಾಡುಪಾಪವೊಂದು ಭಾನುವಾರ ಮುಂಜಾನೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯುತ್ ತಂತಿ ತಗುಲಿ ಶಾಕ್‍ನಿಂದಾಗಿ ಮೃತಪಟ್ಟಿರಬಹುದೆಂದು ಊಹಿಸಲಾಗಿದ್ದು, ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ನಾಗರಿಕರು ಇದನ್ನು ಗಮನಿಸಿ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಿನಾಶದಂಚಿನಲ್ಲಿರುವ ಈ ಪ್ರಾಣಿಯ ಹೆಸರು ಇಂಡಿಯನ್ ಸ್ಲೆಂಡರ್ ಲೋರಿಸ್. ಸ್ಥಳೀಯ ಭಾಷೆಯಲ್ಲಿ ಕಾಡುಪಾಪ ಎಂದು ಕರೆಯಲ್ಪಡುವ ಪ್ರಾಣಿ ಕೇವಲ ಎರಡು- ಮೂರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಅಲ್ಲಲ್ಲಿ ಕಾಡುದಟ್ಟವಾಗಿರುವ ಸ್ಥಳಗಳಲ್ಲಿ ಕಂಡು ಬರುತ್ತಿತ್ತು. ಈಗ ಗಿಳಿಯನ್ನು ಬೋನಿನಲ್ಲಿ ಇಟ್ಟುಕೊಂಡು ಶಾಸ್ತ್ರ ಹೇಳುವಂತೆ ಆಗ ಇದನ್ನೂ ಸಹ ಹಿಡಿದು ಪಳಗಿಸಿ ಶಾಸ್ತ್ರ ಹೇಳಲು ಬಳಸಿಕೊಳ್ಳುತ್ತಿದ್ದರು. ನಗರೀಕರಣದ ದಾಳಿಗೆ ತುತ್ತಾಗಿ ಅರಣ್ಯಗಳು ಕಣ್ಮರೆಯಾದಂತೆಲ್ಲಾ ವನ್ಯಮೃಗಗಳು ನಶಿಸುತ್ತಾ ಬರುವುದು ಸಾಮಾನ್ಯ. ಆ ಪಟ್ಟಿಗೆ ಕಾಡುಪಾಪ ಸಹ ಸೇರಿದೆ.
ಕಾಡುಪಾಪದ ಮಾಂಸ ತಿಂದರೆ ಲೈಂಗಿಕ ಶಕ್ತಿ ವೃದ್ಧಿಸುತ್ತದೆ ಎಂಬ ಮೂಢನಂಬಿಕೆಯೂ ಸಹ ಈ ಮುದ್ದು ಪ್ರಾಣಿಯ ಸಂತತಿ ನಶಿಸಲು ಮುಖ್ಯ ಕಾರಣವಾಗಿದೆ. ಅಲ್ಲೊಂದು ಇಲ್ಲೊಂದು ಕಾಣಸಿಗುವ ಈ ಮುದ್ದುಜೀವಿ ಅರಣ್ಯ ಇಲಾಖೆಯ ಅವಗಣನೆ ಹಾಗೂ ನಾಗರಿಕರ ಕ್ರೌರ್ಯಕ್ಕೆ ಸಿಲುಕಿದರೆ ಶಾಶ್ವತವಾಗಿ ಕಣ್ಮರೆಯಾಗುವ ಸಂಭವವಿದೆ.

ಹೆಚ್ಚಿನ ಸುದ್ದಿ

error: Content is protected !!