ದಕ್ಷಿಣ ಕನ್ನಡ : ಬೆಂಗಳೂರು (Bengaluru) ಹಾಗೂ ಮಂಗಳೂರು (Mangalore) ನಗರಗಳ ನಡುವೆ ಸಂಚರಿಸಲು ಬಹುನಿರೀಕ್ಷಿತವಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ (Vande Bharath express train) ಪ್ರಾಯೋಗಿಕ ಸಂಚಾರವನ್ನು (Trail run) ನೈಋತ್ಯ ರೈಲ್ವೆಯು ದಿಢೀರನೆ ರದ್ದುಗೊಳಿಸಿದೆ. ಜೂನ್ ೩ ರಂದು ಯಶವಂತಪುರದಿಂದ ಮಂಗಳೂರಿಗೆ ಎಂಟು ಬೋಗಿಗಳ ಈ ಸೆಮಿ ಹೈಸ್ಪೀಡ್ ರೈಲಿನ ಟ್ರಯಲ್ ರನ್ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ವಿಶೇಷವಾಗಿ ಕರಾವಳಿ ಭಾಗದ ಪ್ರಯಾಣಿಕರು ಮತ್ತು ರೈಲ್ವೆ ಪ್ರೇಮಿಗಳು ಈ ಪ್ರಾಯೋಗಿಕ ಓಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು.
ಅತ್ಯಂತ ಕಡಿದಾದ ಮತ್ತು ಸವಾಲಿನಿಂದ ಕೂಡಿರುವ ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲಿನ ಸಾಮರ್ಥ್ಯ, ವೇಗ ಹಾಗೂ ತಾಂತ್ರಿಕ ಅಂಶಗಳನ್ನು ಪರೀಕ್ಷಿಸುವುದು ಈ ಪ್ರಾಯೋಗಿಕ ಸಂಚಾರದ ಮುಖ್ಯ ಉದ್ದೇಶವಾಗಿತ್ತು. ಆದರೆ ರೈಲ್ವೆ ಇಲಾಖೆಯ ಮುಖ್ಯ ಪ್ರಯಾಣಿಕರ ಸಾರಿಗೆ ವ್ಯವಸ್ಥಾಪಕರ ಕಚೇರಿಯು ತುರ್ತು ಆದೇಶ ಹೊರಡಿಸಿ ಈ ಯೋಜನೆಯನ್ನು ಹಿಂತೆಗೆದುಕೊಂಡಿದೆ. ಇದರಿಂದಾಗಿ ನಿಲ್ದಾಣಗಳಲ್ಲಿ ಮಾಡಲಾಗಿದ್ದ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ : ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ- ಎಂದಿನಂತೆ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಆರಂಭ
ಆದ್ರೆ ರೈಲ್ವೆ ಮಂಡಳಿ ಈ ಹಠಾತ್ ನಿರ್ಧಾರಕ್ಕೆ ಯಾವುದೇ ನಿಖರವಾದ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಈ ಮಾರ್ಗದಲ್ಲಿ ಸರಕು ಸಾಗಣೆ ರೈಲುಗಳು ಎಂದಿನಂತೆ ಚಲಿಸುತ್ತಿರುವುದರಿಂದ ಮೂಲಸೌಕರ್ಯದ ಕೊರತೆ ಕಾರಣವಲ್ಲ ಎನ್ನಲಾಗಿದೆ. ಬದಲಿಗೆ, ಈ ಪ್ರಾಯೋಗಿಕ ಪರೀಕ್ಷೆಗೆ ಅಗತ್ಯವಿರುವ ವಿಶೇಷ ವಂದೇ ಭಾರತ್ ರೈಲಿನ ಬೋಗಿಗಳು ಲಭ್ಯವಿಲ್ಲದಿರುವುದು ಮತ್ತು ಇತರ ಕೆಲವು ಆಂತರಿಕ ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಾಯೋಗಿಕ ಓಟವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.