ನವದೆಹಲಿ: ಭಾರತದ (India) ಸಾಗರ ಸುರಕ್ಷತೆ ಮತ್ತು ನೌಕಾಪಡೆಯ ಇತಿಹಾಸದಲ್ಲಿ ಪ್ರಸಕ್ತ ಜೂನ್ ತಿಂಗಳು ಮಹತ್ವದ ಮೈಲಿಗಲ್ಲಾಗಲು ಸಜ್ಜಾಗಿದೆ. ಸಮುದ್ರದಲ್ಲಿ ಭಾರತದ ರಕ್ಷಣಾ ಕೋಟೆಯನ್ನು ಮತ್ತಷ್ಟು ಭದ್ರಪಡಿಸಲು ಬರೋಬ್ಬರಿ 5 ಅತ್ಯಾಧುನಿಕ ಯುದ್ಧನೌಕೆಗಳು ಹಾಗೂ ನೌಕಾ ಪ್ಲಾಟ್‌ಫಾರ್ಮ್‌ಗಳು ಇದೇ ತಿಂಗಳಲ್ಲಿ ಭಾರತೀಯ ನೌಕಾಪಡೆಯನ್ನು (Indian Navy) ಸೇರಿಕೊಳ್ಳಲಿವೆ. ಕೇಂದ್ರ ಸರ್ಕಾರದ (Central Government) ಅತ್ಯಂತ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ (Atmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make in India) ಯೋಜನೆಗಳಿಗೆ ಸಿಕ್ಕ ಭರ್ಜರಿ ಯಶಸ್ಸು ಇದಾಗಿದ್ದು, ದೇಶದ ರಕ್ಷಣಾ ಉತ್ಪಾದನಾ ವಲಯದಲ್ಲಿ ಭಾರತ ಸಾಧಿಸುತ್ತಿರುವ ಸ್ವಾವಲಂಬನೆಗೆ ಇದು ಸಾಕ್ಷಿಯಾಗಿದೆ. ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ತಗ್ಗಿಸಿರುವ ಈ ಐದು ನೌಕೆಗಳು ಹಿಂದೂ ಮಹಾಸಾಗರ ಸೇರಿದಂತೆ ಆಯಕಟ್ಟಿನ ಜಲಪ್ರದೇಶಗಳಲ್ಲಿ ಭಾರತದ ಸಾರ್ವಭೌಮತ್ವವನ್ನು ಹೆಚ್ಚಿಸಲಿವೆ.
ಯುದ್ಧ ನೌಕೆಗಳ ವಿಶೇಷತೆ ಏನು?
ದೇಶದ ಮುಂಚೂಣಿಯ ನೌಕಾ ಹಡಗು ನಿರ್ಮಾಣ ಸಂಸ್ಥೆಗಳಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ (GRSE) ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಈ ಪೈಕಿ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಿದ್ದರೆ, ಅತ್ಯಂತ ಶಕ್ತಿಶಾಲಿ ಐಎನ್ಎಸ್ ಮಹೇಂದ್ರಗಿರಿ ಯುದ್ಧನೌಕೆಯನ್ನು ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿದೆ.
ದುನಾಗಿರಿ (Dunagiri)
ಕೋಲ್ಕತ್ತಾದ ಜಿಆರ್‌ಎಸ್‌ಇ ಸಂಸ್ಥೆಯು ಅತ್ಯಾಧುನಿಕ ಪ್ರಾಜೆಕ್ಟ್ 17ಎ ಅಡಿಯಲ್ಲಿ ಈ ಸ್ಟೆಲ್ತ್ ಫ್ರಿಗೇಟ್ (ರಹಸ್ಯ ಯುದ್ಧನೌಕೆ) ಅನ್ನು ನಿರ್ಮಿಸಿದೆ. ಶತ್ರುಗಳ ಕಣ್ಣಿಗೆ ಮಣ್ಣೆರಚಿ ಸಾಗುವ ತಂತ್ರಜ್ಞಾನ ಹೊಂದಿರುವ ಈ ನೌಕೆಯು ಅತ್ಯಾಧುನಿಕ ಸೆನ್ಸಾರ್‌ಗಳು, ಅತ್ಯಂತ ವಿನಾಶಕಾರಿ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದು ನೌಕಾಪಡೆಯ ಮುಂಚೂಣಿ ಯುದ್ಧ ಸಾಮರ್ಥ್ಯಕ್ಕೆ ಆನೆಬಲ ತರಲಿದೆ.
ಐಎನ್ಎಸ್ ಮಹೇಂದ್ರಗಿರಿ (INS Mahendragiri)
ಪ್ರಾಜೆಕ್ಟ್ 17ಎ ಅಡಿಯಲ್ಲೇ ನಿರ್ಮಾಣವಾಗಿರುವ ಮತ್ತೊಂದು ಮುಂದಿನ ಪೀಳಿಗೆಯ ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ಯುದ್ಧನೌಕೆ ಇದಾಗಿದೆ. ಮಜಗಾಂವ್ ಡಾಕ್‌ನಲ್ಲಿ ನಿರ್ಮಾಣವಾಗಿರುವ ಈ ನೌಕೆಯು ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೆಚ್ಚಿಸಲಿದ್ದು, ಸಮುದ್ರದ ಮೇಲಿನ ಜಟಿಲ ಯುದ್ಧ ತಂತ್ರಗಳಿಗೆ ಹೆಚ್ಚಿನ ನಮ್ಯತೆಯನ್ನು ನೀಡಲಿದೆ.
ಸಂಶೋಧಕ್ (Sanshodhak)
ಇದು ನೌಕಾಪಡೆಯ ಬೃಹತ್ ಸಮೀಕ್ಷಾ ನೌಕೆಯಾಗಿದ್ದು (Survey Vessel Large), ಸಮುದ್ರದ ತಳಭಾಗದ ನಿಖರವಾದ ಮ್ಯಾಪಿಂಗ್ ಮತ್ತು ಸುಧಾರಿತ ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ನಡೆಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಜಲಪ್ರದೇಶದ ಅಡಗಿರುವ ರಹಸ್ಯಗಳನ್ನು ಪತ್ತೆಹಚ್ಚಲು ಮತ್ತು ಸೇನಾ ಯೋಜನೆಗಳಿಗೆ ನೆರವಾಗಲಿದೆ.
ಅಗ್ರೇ ಮತ್ತು ಮಾಲ್ವನ್ (Agray & Malvan)
ಇವೆರಡೂ ಆಳವಿಲ್ಲದ ಕರಾವಳಿ ತೀರದ ನೀರಿನಲ್ಲಿ ಅಡಗಿರುವ ಶತ್ರು ದೇಶಗಳ ಜಲಾಂತರ್ಗಾಮಿಗಳನ್ನು (Submarines) ಪತ್ತೆಹಚ್ಚಿ, ಅವುಗಳ ಚಲನವಲನದ ಮೇಲೆ ನಿರಂತರ ನಿಗಾ ಇಟ್ಟು ಧ್ವಂಸಗೊಳಿಸುವ ವಿಶೇಷ ಸಾಮರ್ಥ್ಯದ ಆಂಟಿ-ಸಬ್‌ಮರೀನ್ ಯುದ್ಧನೌಕೆಗಳಾಗಿವೆ. ಇವುಗಳಲ್ಲಿ ಅಗ್ರೇ ನೌಕೆಯನ್ನು ಜಿಆರ್‌ಎಸ್‌ಇ ನಿರ್ಮಿಸಿದ್ದರೆ, ಮಾಲ್ವನ್ ನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ನಿರ್ಮಿಸಿದೆ. ಇವೆರಡೂ ಭಾರತದ ಕರಾವಳಿ ಭದ್ರತಾ ವ್ಯವಸ್ಥೆಗೆ ಭದ್ರವಾದ ಕವಚವನ್ನು ನೀಡಲಿವೆ.
ದೇಶೀಯ ಹಡಗು ನಿರ್ಮಾಣ ವಲಯವು ಇತ್ತೀಚಿನ ವರ್ಷಗಳಲ್ಲಿ ಸಾಧಿಸಿರುವ ಅಸಾಧಾರಣ ತಾಂತ್ರಿಕ ಪ್ರಗತಿಗೆ ಈ ಐದು ಯುದ್ಧನೌಕೆಗಳ ಸರಣಿ ಸೇರ್ಪಡೆಯೇ ಸಾಕ್ಷಿ. ಜೂನ್ ತಿಂಗಳಲ್ಲಿ ಈ ಎಲ್ಲಾ ನೌಕೆಗಳು ಅಧಿಕೃತವಾಗಿ ದೇಶದ ರಕ್ಷಣಾ ಸೇವೆಗೆ ಸಮರ್ಪಿತವಾಗಲಿದ್ದು, ಸಾಗರದಾಳದಲ್ಲಿ ಭಾರತೀಯ ನೌಕಾಪಡೆಯ ಯುದ್ಧ ಸನ್ನದ್ಧತೆ, ಕರಾವಳಿ ರಕ್ಷಣೆ ಮತ್ತು ಆಕ್ರಮಣಕಾರಿ ದಾಳಿಯ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ಉನ್ನತ ಹಂತಕ್ಕೆ ಕೊಂಡೊಯ್ಯಲಿವೆ.