ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನೇರವಾಗಿ ಮಾತನಾಡದ ಕಾರಣ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಸಾಧ್ಯವಾಗಿಲ್ಲ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರ ಹೇಳಿಕೆ ಸರಿಯಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಅಮೆರಿಕದ ಕಠಿಣ ಸುಂಕ ನೀತಿ ವೈಯಕ್ತಿಕ ವಿಚಾರಗಳಿಂದ ಪ್ರೇರಿತವಾಗಿದೆ ಎಂಬ ಆರೋಪವನ್ನೂ ಭಾರತ ತಳ್ಳಿಹಾಕಿದೆ.
ಮೋದಿ ಅವರು ವೈಯಕ್ತಿಕವಾಗಿ ಟ್ರಂಪ್ ಅವರನ್ನು ಭೇಟಿಯಾಗಿ ಅವರ ಬೇಡಿಕೆಗಳಿಗೆ ಒಪ್ಪದೇ ಇರುವುದರಿಂದ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಲಾಗಿದೆ ಎಂಬ ಲುಟ್ನಿಕ್ ಅವರ ಆರೋಪ ವಾಸ್ತವಕ್ಕೆ ದೂರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಕ್ತಾರ ರಣಧೀರ್ ಜೈಸ್ವಾಲ್, ಕಳೆದ ವರ್ಷದ ಫೆಬ್ರವರಿಯಿಂದಲೇ ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸತತ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಸಮತೋಲಿತ ಹಾಗೂ ಪರಸ್ಪರ ಲಾಭದಾಯಕ ಒಪ್ಪಂದಕ್ಕೆ ಬರಲು ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ನಾವು ಒಪ್ಪಂದದ ಸನಿಹದಲ್ಲಿದ್ದೇವೆ. ಆದರೆ ಈ ಕುರಿತು ಅಮೆರಿಕದ ಸಚಿವರ ಹೇಳಿಕೆ ವಾಸ್ತವಾಧಾರಿತವಲ್ಲ” ಎಂದು ಅವರು ಸ್ಪಷ್ಟಪಡಿಸಿದರು. 2025ರಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಎಂಟು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಜೈಸ್ವಾಲ್ ಹೇಳಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ.50ರಷ್ಟು ಸುಂಕ ವಿಧಿಸಿದ ಬಳಿಕ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿದ್ದವು. ಇದರಲ್ಲಿ ಶೇ.25ರಷ್ಟು ಪ್ರತಿಸುಂಕ ಹಾಗೂ ರಷ್ಯಾದಿಂದ ತೈಲ ಖರೀದಿ ಹಿನ್ನೆಲೆ ಮತ್ತಷ್ಟು ಶೇ.25ರಷ್ಟು ಸುಂಕ ಸೇರಿತ್ತು. ರಷ್ಯಾ ತೈಲ ಖರೀದಿಯನ್ನು ಕಡಿತಗೊಳಿಸದಿದ್ದರೆ ಇನ್ನಷ್ಟು ಸುಂಕ ವಿಧಿಸುವ ಎಚ್ಚರಿಕೆಯನ್ನೂ ಅಮೆರಿಕ ನೀಡಿತ್ತು. ಈ ಬೆಳವಣಿಗೆಗಳು ರೂಪಾಯಿ ಮೌಲ್ಯ ಕುಸಿತಕ್ಕೂ ಕಾರಣವಾಗಿವೆ.
ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಳು ಹಲವು ತಿಂಗಳುಗಳಿಂದ ನಡೆಯುತ್ತಿದ್ದರೂ ಕೃಷಿ ವಲಯದ ಸುಂಕ ವಿಚಾರದಲ್ಲಿ ಒಮ್ಮತ ಸಿಗದಿರುವುದು ಒಪ್ಪಂದ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಟ್ರಂಪ್ ನಿಂದ ಪ್ರಧಾನಿ ಮೋದಿ ಅವಹೇಳನ – ಭಾರತಕ್ಕೆ ಮೌನವೇ ಆಭರಣ!