ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಘರ್ಷಣೆ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಅನ್ನು ಇಂದು ಮುಂದೂಡಲಾಗಿದೆ. ದೇಶ ಯುದ್ಧದಲ್ಲಿರುವಾಗ ಕ್ರಿಕೆಟ್ ನಡೆಯುತ್ತಿರುವುದು ಒಳ್ಳೆಯದಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ಮಾಹಿತಿಯ ಪ್ರಕಾರ, ಐಪಿಎಲ್ ಅನ್ನು ಒಂದು ವಾರ ಮುಂದೂಡಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಹೊಸ ವೇಳಾಪಟ್ಟಿಯನ್ನು ಹೊರಡಿಸಲಾಗುತ್ತದೆ.
ನಿನ್ನೆ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಈ ಘಟನೆಯು ವಿಶೇಷವಾಗಿ ವಿದೇಶಿ ಆಟಗಾರರಲ್ಲಿ ಭದ್ರತಾ ಕಳವಳಗಳನ್ನು ಹೆಚ್ಚಿಸಿತು ಮತ್ತು ಬಿಸಿಸಿಐ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂಬ ಕರೆಗಳನ್ನು ತೀವ್ರಗೊಳಿಸಿತು.
ಈ ನಿರ್ಣಾಯಕ ಹಂತದಲ್ಲಿ ಬಿಸಿಸಿಐ ರಾಷ್ಟ್ರದ ಜೊತೆ ದೃಢವಾಗಿ ನಿಲ್ಲುತ್ತದೆ. ನಾವು ಭಾರತ ಸರ್ಕಾರ, ಸಶಸ್ತ್ರ ಪಡೆಗಳು ಮತ್ತು ನಮ್ಮ ದೇಶದ ಜನರೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಮಂಡಳಿಯು ವಂದಿಸುತ್ತದೆ ಎಂದು ಬಿಸಿಸಿಐ ಹೇಳಿದೆ.