Friday, March 21, 2025
Homeದೇಶಜನರ ಮೇಲೆ ನಿಗಾ ಇಡಲು ಹೊಸ ಸ್ಪೈವೇರ್ ಖರೀದಿ: ಕೇಂದ್ರ ಸರ್ಕಾರದ ಮೇಲೆ ಆರೋಪ

ಜನರ ಮೇಲೆ ನಿಗಾ ಇಡಲು ಹೊಸ ಸ್ಪೈವೇರ್ ಖರೀದಿ: ಕೇಂದ್ರ ಸರ್ಕಾರದ ಮೇಲೆ ಆರೋಪ

ನವದೆಹಲಿ: ವಿವಾದಾತ್ಮಕ ಪೆಗಾಸಸ್ ಸ್ಪೈವೇರ್ ಗೆ ಬದಲಾಗಿ ಹೆಚ್ಚು ಪರಿಚಯವಿಲ್ಲದ ಹೊಸ ಸ್ಪೈವೇರ್ ಖರೀದಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ಸ್ಪೋಟಕ ವರದಿ ಪ್ರಕಟ ಮಾಡಿದೆ. ಈಗಾಗಲೇ ಇಸ್ರೇಲ್ ನಿರ್ಮಿತ ಪೆಗಾಸಸ್ ಸ್ಪೈವೇರನ್ನು ಅಮೆರಿಕ ಸರಕಾರ ಕಪ್ಪುಪಟ್ಟಿಗೆ ಸೇರಿಸಿದೆ.

ಪೆಗಾಸಸ್ ತಯಾರಿಸಿದ ಇಸ್ರೇಲ್ ನ ಎನ್ ಎಸ್ ಒ ಗ್ರೂಪ್ ನಷ್ಟು ಬಹಿರಂಗಗೊಳ್ಳದ ಹೊಸ ಸ್ಪೈವೇರ್ ಖರೀದಿಗೆ ಭಾರತ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಸ್ಪೈವೇರ್ ಮೂಲಕ ಪ್ರಜೆಗಳ ಮೇಲೆ ನಿಗಾ ಇರಿಸುತ್ತಿದೆ ಎನ್ನುವ ಆರೋಪ ಕೇಂದ್ರ ಸರಕಾರದ ಮೇಲಿದೆ. ಹೀಗಿದ್ದೂ ಮತ್ತೊಂದು ಸ್ಪೈವೇರ್ ಖರೀದಿಗೆ ಮುಂದಾಗಿದೆ ಎನ್ನುವ ಫೈನಾನ್ಶಿಯನ್ ಎಕ್ಸ್ ಪ್ರೆಸ್ ವರದಿ ಈಗ ಭಾರೀ ಸುದ್ದಿ ಮಾಡುತ್ತಿದೆ.

ಕೆಲ ದಿನಗಳಲ್ಲಿ ಬಿಡ್ಡಿಂಗ್ ನಡೆಯಲಿದ್ದು, ಡಝನ್ ನಷ್ಟು ಸ್ಪೈವೇರ್ ತಯಾರಕರು ಭಾಗವಹಿಸಲಿದ್ದಾರೆ. ವಿಶ್ವಾದ್ಯಂತ ಸರಕಾರಗಳು ಸ್ಪೈವೇರ್ ಗಳನ್ನು ಬಳಸಿ ಟೀಕಾಕಾರನ್ನು ಗುರಿ ಮಾಡುತ್ತಿದ್ದರೂ ಈ ಅತ್ಯಾಧುನಿಕ ಮತ್ತು ಯಾವುದೇ ನಿಯಂತ್ರಣವಿಲ್ಲದ ಸ್ಪೈ ವೇರ್ ಗಳಿಗೆ ಇನ್ನೂ ಬೇಡಿಕೆ ಇದೆ ಎನ್ನುವುದನ್ನು ಈ ನಡೆ ತೋರಿಸುತ್ತದೆ ಎಂದು ವರದಿ ಹೇಳಿದೆ.

ಇದುವರೆಗೂ ಕೇಂದ್ರ ಸರಕಾರ ತಾನು ಎನ್ ಎಸ್ ಒದ ಗ್ರಾಹಕ ಎಂದು ಹೇಳಿಲ್ಲ. ಆದರೆ ಪೆಗಾಸಸ್ ಮಾಲ್ವೇರ್, ಪತ್ರಕರ್ತರು, ಎಡಪಂಥೀಯರು, ವಿರೋಧ ಪಕ್ಷದ ನಾಯಕರ ಫೋನ್ ಗಳಲ್ಲಿ ಪತ್ತೆಯಾಗಿತ್ತು. ಇದು ಭಾರೀ ವಿವಾದ ಸೃಷ್ಟಿಸಿದ್ದು, ಕೇಂದ್ರ ಸರಕಾರ ಅನ್ಯ ಮಾರ್ಗ ಬಳಸುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಒಬ್ಬರ ಫೋನನ್ನು ಕಣ್ಗಾವಲು ಡಿವೈಸ್ ಆಗಿ ಬದಲಿಸಬಲ್ಲ ಸಾಮರ್ಥ್ಯ ಇರುವ ಪೆಗಾಸಸ್ ವಾಟ್ಸ್ ಆ್ಯಪ್ ನ ಎನ್ ಕ್ರಿಪ್ಟೆಡ್ ಮತ್ತು ಸಿಗ್ನಲ್ ಮೆಸೇಜ್ ಗಳನ್ನು ಕದ್ದಾಲಿಸುತ್ತದೆ.

ಪೆಗಾಸಸ್ ಪತ್ತೆ ಹಚ್ಚಲು ಮಾನವಹಕ್ಕು ಗುಂಪುಗಳ ಬಳಸಿದ ತಂತ್ರಜ್ಞಾನವು ಕೇಂದ್ರ ಸರಕಾರದ ಅಧಿಕಾರಿಗಳಿಗೆ ತಲೆನೋವಾಗಿದೆ. ಇದಲ್ಲದೆ ಆಪಲ್ ಮತ್ತು ವಾಟ್ಸಾಪ್ ಪೆಗಾಸಸ್ ಬಳಸಲ್ಪಟ್ಟವರಿಗೆ ಎಚ್ಚರಿಕೆಗಳನ್ನೂ ನೀಡಿತ್ತು. ಹೀಗಾಗಿ ಕೇಂದ್ರ ಸರಕಾರವು ಹೊಸ ಸ್ಪೈವೇರ್ ಕಾಂಟ್ರಾಕ್ಟ್ ಗಾಗಿ ಪೆಗಾಸಸ್ ಬಿಟ್ಟು ಬೇರೆ ಕಡೆಗೆ ನೋಡುತ್ತಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ತಿಳಿಸಿದೆ.

ಹೆಚ್ಚಿನ ಸುದ್ದಿ

error: Content is protected !!