Monday, June 15, 2026
Homeಟಾಪ್ ನ್ಯೂಸ್INDIA-NEPAL: ಭಾರತ-ನೇಪಾಳ ಗಡಿ ವಿವಾದ: ಮೂರನೇ ದೇಶದ ಮಧ್ಯಸ್ಥಿಕೆಗೆ ಭಾರತದ ಖಡಕ್ ನಿರಾಕರಣೆ!

INDIA-NEPAL: ಭಾರತ-ನೇಪಾಳ ಗಡಿ ವಿವಾದ: ಮೂರನೇ ದೇಶದ ಮಧ್ಯಸ್ಥಿಕೆಗೆ ಭಾರತದ ಖಡಕ್ ನಿರಾಕರಣೆ!

ನವದೆಹಲಿ: ಭಾರತ ಮತ್ತು ನೇಪಾಳ (India-Nepal) ನಡುವಿನ ದಶಕಗಳ ಹಳೆಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಮೂರನೇ ದೇಶದ ಹಸ್ತಕ್ಷೇಪ ಅಥವಾ ಮಧ್ಯಸ್ಥಿಕೆಯನ್ನು ಭಾರತ ಸರ್ಕಾರ ಸಂಪೂರ್ಣವಾಗಿ ನಿರಾಕರಿಸಿದೆ. ಈ ಗಡಿ ಸಮಸ್ಯೆಯ ಚರ್ಚೆಗೆ ಚೀನಾ ಮತ್ತು ಬ್ರಿಟನ್ (ಯುನೈಟೆಡ್ ಕಿಂಗ್‌ಡಮ್) ದೇಶಗಳನ್ನು ಸೇರಿಸಬೇಕು ಎಂದು ನೇಪಾಳ ಪ್ರಧಾನಿ ಬಲೇಂದ್ರ ಶಾ ನೀಡಿರುವ ಹೇಳಿಕೆಗೆ ಭಾರತ ಅತ್ಯಂತ ಕಠಿಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದೆ. ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಗಳನ್ನು ಕೇವಲ ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.

ನೇಪಾಳ ಪ್ರಧಾನಿ ಹೇಳಿದ್ದೇನು?
ನೇಪಾಳ ಸಂಸತ್ತಿನಲ್ಲಿ ಮಾತನಾಡಿದ್ದ ಪ್ರಧಾನಿ ಬಲೇಂದ್ರ ಶಾ, ಗಡಿ ವಿವಾದದ ಕುರಿತು ತಾವು ಕೇವಲ ಭಾರತದೊಂದಿಗೆ ಮಾತ್ರವಲ್ಲದೆ, ಚೀನಾ ಮತ್ತು ಲಂಡನ್ ಜೊತೆ ಸಹ ಸಂಪರ್ಕದಲ್ಲಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಬ್ರಿಟಿಷ್ ಇಂಡಿಯಾ ಈ ಪ್ರದೇಶವನ್ನು ಬಿಟ್ಟು ಹೋದ ಕಾಲದಿಂದಲೂ ಈ ಗಡಿ ಸಮಸ್ಯೆ ಇರುವುದರಿಂದ, ಬ್ರಿಟನ್ ಕೂಡ ಈ ಚರ್ಚೆಯಲ್ಲಿ ಭಾಗಿಯಾಗಬೇಕು ಎಂಬುದು ನೇಪಾಳದ ವಾದವಾಗಿದೆ. ನೇಪಾಳ ಪ್ರಧಾನಿಯ ಈ ಹೇಳಿಕೆ ಆ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಗಡಿ ವಿಷಯದ ಎಲ್ಲಾ ಆಯಾಮಗಳನ್ನು ನಿಭಾಯಿಸಲು ಭಾರತ ಮತ್ತು ನೇಪಾಳ ನಡುವೆ ಈಗಾಗಲೇ  ದ್ವಿಪಕ್ಷೀಯ ವ್ಯವಸ್ಥೆಗಳು ಜಾರಿಯಲ್ಲಿವೆ. ಹೀಗಿರುವಾಗ ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶಕ್ಕೆ ಯಾವುದೇ ಪಾತ್ರವಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿರಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಏನಿದು ಗಡಿ ವಿವಾದ?
ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವು ಮುಖ್ಯವಾಗಿ ಪಶ್ಚಿಮ ವಲಯದಲ್ಲಿರುವ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿದೆ. ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳ ವಾದಿಸುತ್ತಿದ್ದರೆ, ಇವೆಲ್ಲವೂ ಉತ್ತರಾಖಂಡ ರಾಜ್ಯದ ಅವಿಭಾಜ್ಯ ಅಂಗಗಳಾಗಿವೆ ಎಂದು ಭಾರತ ಪ್ರತಿಪಾದಿಸುತ್ತಿದೆ. ಭಾರತ ಮತ್ತು ನೇಪಾಳ ನಡುವಿನ ಶೇಕಡಾ 98 ರಷ್ಟು ಗಡಿಯನ್ನು ಈಗಾಗಲೇ ಯಶಸ್ವಿಯಾಗಿ ಗುರುತಿಸಲಾಗಿದೆ ಎಂದು ತಿಳಿಸಿರುವ ವಿದೇಶಾಂಗ ವಕ್ತಾರರು, ಗಂಡಕ್ ನದಿಯು ತನ್ನ ಹರಿವಿನ ಹಾದಿಯನ್ನು ಬದಲಾಯಿಸುತ್ತಿರುವುದರಿಂದ ಕೆಲವು ಸಣ್ಣ ಭಾಗಗಳಲ್ಲಿ ಮಾತ್ರ ಇನ್ನು ಸಮಸ್ಯೆ ಬಗೆಹರಿದಿಲ್ಲ ಎಂದಿದ್ದಾರೆ. ಇದಲ್ಲದೆ, ಈಗಾಗಲೇ ಗಡಿ ಗುರುತಿಸಲಾದ ಕೆಲವು ಪ್ರದೇಶಗಳಲ್ಲಿ ಉಭಯ ದೇಶಗಳ ಕಡೆಯಿಂದಲೂ ಅತಿಕ್ರಮಣ ನಡೆದಿದ್ದು, ಈ ‘ನೋ ಮ್ಯಾನ್ಸ್ ಲ್ಯಾಂಡ್’ (ಯಾರಿಗೂ ಸೇರದ ಜಾಗ) ಅತಿಕ್ರಮಣದ ಬಗ್ಗೆ ಜಂಟಿ ನಕ್ಷೆ ತಯಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ವಿಶೇಷವೆಂದರೆ, ನೇಪಾಳದ ಕಡೆಯಿಂದಲೂ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂಬುದನ್ನು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಭೂಮಿಯನ್ನೂ ನೇಪಾಳ ಅತಿಕ್ರಮಿಸಿದೆ – ಪಿಎಂ ಬಾಲೆನ್ ಶಾ ಹೇಳಿಕೆ ನೇಪಾಳದಲ್ಲೇ ಭಾರೀ ವಿರೋಧ!

ಹೆಚ್ಚಿನ ಸುದ್ದಿ

Change Language »
error: Content is protected !!