ಬೆಳಗಾವಿ: ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ (Inamdar Sugar Factory) ಸಂಭವಿಸಿದ್ದ ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕ (Worker) ಮಂಜುನಾಥ ತೇರದಾಳ ಪತ್ನಿ ತುಂಬು ಗರ್ಭಿಣಿಯಾಗಿದ್ದು (Pregnant), ಮೊದಲ ಮಗುವಿನ (Baby) ನಿರೀಕ್ಷೆಯಲ್ಲಿ ಇದ್ದಾರೆ.
ಮೂರು ವರ್ಷಗಳ ಹಿಂದೆ ಅಥಣಿ ಪಟ್ಟಣದ ಮೃತ ಮಂಜುನಾಥ ಅವರು ಶೃತಿ ಎಂಬಾಕೆಯನ್ನು ಮದುವೆಯಾಗಿದ್ದರು. ಸದ್ಯ ತುಂಬು ಗರ್ಭಿಣಿಯಾಗಿರುವ ಶೃತಿ ಅವರಿಗೆ ಜನವರಿ 16 ಕ್ಕೆ ಹೆರಿಗೆ ದಿನಾಂಕವನ್ನು ವೈದ್ಯರು ನೀಡಿದ್ದಾರೆ.
ಮಂಜುನಾಥ ಬದುಕಲ್ಲಿ ವಿಧಿ ಆಟವಾಡಿದ್ದು ಇನ್ನೇನು ಒಂದು ವಾರದಲ್ಲಿ ಮುದ್ದು ಮಗುವಿನ ಮುಖ ನೋಡಬೇಕಾಗಿದ್ದ ತಂದೆ ಭೀಕರ ದುರಂತದಲ್ಲಿ ಮೃತಪಟ್ಟಿದ್ದು ವಿಪರ್ಯಾಸವೇ ಸರಿ.
ಘಟನೆ ವಿವರ: ಬುಧವಾರ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಮೊದಲನೆ ಕಂಪಾರ್ಟಮೇಂಟಿನ ಬಾಯ್ಲರ್ ವಾಲ್ ಏಕಾಏಕಿ ಸಿಡಿದ ವೇಳೆ ಬಿಸಿ ಮಳ್ಳಿ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ 8 ಜನ ಕಾರ್ಮಿಕರ ಮೇಲೆ ಬಿದ್ದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಎಲ್ಲಾ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಕೇಸ್- ಮೃತರ ಸಂಖ್ಯೆ 8 ಕ್ಕೆ ಏರಿಕೆ
ಘಟನೆ ನಡೆದ ಬುಧವಾರ ರಬಕವಿಯ ಅಕ್ಷಯ್ ಚೋಪಡೆ (48), ಖಾನಾಪುರ ತಾಲೂಕಿನ ಚಿಕ್ಕಮನವಳ್ಳಿ ಗ್ರಾಮದ ಸುದರ್ಶನ ಬನೋಶಿ (25) ಹಾಗೂ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ದೀಪಕ್ ಮನವಳ್ಳಿ (32) ಮೂವರು ಕಾರ್ಮಿಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಗೋಕಾಕ್ ತಾಲೂಕಿನ ಗಿಳಿಹೊಸುರ ಗ್ರಾಮದ ರಾಘವೇಂದ್ರ ಗಿರಿಯಾಳ (32) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಂಭೀರವಾಗಿ ಗಾಯಗೊಂಡು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರಲ್ಲಿ ಇಂದು ನಾಲ್ವರು ಮೃತಪಟ್ಟಿದ್ದಾರೆ. ಮೃತರು ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಕಾಜಗಾರ (28), ಗೋಕಾಕ್ ತಾಲೂಕಿನ ಗೊಡಚಿಮಲ್ಕಿ ಗ್ರಾಮದ ಭರತೇಶ ಸಾರವಾಡ (27), ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮಣ್ಣವರ (38) ಹಾಗೂ ಅಥಣಿ ಪಟ್ಟಣದ ಮಂಜುನಾಥ ತೇರದಾಳ (31) ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎಸ್‌ಪಿ ರಾಮರಾಜನ್ ಹೇಳಿದ್ದೇನು..?: ಮರಕುಂಬಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಘಟಕದಲ್ಲಿ ಕುದಿಯವ ಕಬ್ಬಿನ ಹಾಲು ಸಿಡಿದ ಪ್ರಕರಣದಲ್ಲಿ ಕಾರ್ಮಿಕರು ಮೃತಪಟ್ಟ್ದಿದ್ದಾರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.
ಇದೇ ಪ್ರಕರಣ ಅಡಿಯಲ್ಲಿ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯ ವ್ಯವಸ್ಥಾಪಕ ಸಿ.ಸುಬ್ಬುರತಿನಂ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ ಟಾಕಿ, ಡ್ಯೂಟಿ ಜನರ್ ಮ್ಯಾನೇಜರ್ ಎಸ್.ಬಿನೋದಕುಮಾರ ಇವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.