ಸಾವರ್ಕರ್ ಅವರನ್ನು ಅವಮಾನಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂದು ಹೇಳುವ ಮೂಲಕ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ರಾಹುಲ್ ಗಾಂಧಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ವಿಡಿ ಸಾವರ್ಕರ್ ಅವರು ನಮ್ಮ ಆರಾಧ್ಯ ದೈವ. ಅವರನ್ನು ಅವಮಾನಿಸಿದರೇ ನಾವು ಸಹಿಸುವುದಿಲ್ಲ. ಹಾಗಾಗಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಅವಮಾನಿಸದಂತೆ ರಾಹುಲ್ ಗಾಂಧಿಗೆ ಠಾಕ್ರೆ ಸೂಚಿಸಿದ್ದಾರೆ.
ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರಿಗೂ ಕ್ಷಮೆ ಕೇಳುವುದಿಲ್ಲ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಗಾದ ನಂತರ ಹಾಗೂ ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
“ಸಾವರ್ಕರ್ ಅವರನ್ನು 14 ವರ್ಷಗಳ ಕಾಲ ಅಂಡಮಾನ್ನ ಸೆಲ್ಯುಲಾರ್ ಜೈಲಿನಲ್ಲಿ ಇಟ್ಟು, ಊಹಿಸಲಾಗದ ಚಿತ್ರಹಿಂಸೆ ನೀಡಲಾಗಿದೆ. ನಾವು ಆ ನೋವುಗಳನ್ನು ಓದಬಲ್ಲೆವು. ಇದು ತ್ಯಾಗದ ಒಂದು ರೂಪವಾಗಿದೆ. ಸಾವರ್ಕರ್‌ಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
“ವೀರ್ ಸಾವರ್ಕರ್ ನಮ್ಮ ದೇವರು. ಅವರಿಗೆ ಯಾವುದೇ ರೀತಿಯಲ್ಲೂ ಅಗೌರವ ಆಗುವುದನ್ನು ಸಹಿಸಲಾಗುವುದಿಲ್ಲ. ನಾವು ಹೋರಾಡಲು ಸಿದ್ಧರಿದ್ದೇವೆ. ಆದರೆ ನಮ್ಮ ದೇವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ” ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥರು ಹೇಳಿದ್ದಾರೆ.
ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಎಂಬ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯನ್ನು ಪ್ರಜಾಪ್ರಭುತ್ವವನ್ನು ರಕ್ಷಿಸಲು ರಚಿಸಲಾಗಿದೆ. ಅಲ್ಲದೇ ಇದಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅಗತ್ಯವಾಗಿದೆ. ಸಾವರ್ಕರ್‌ಗೆ ಅವಮಾನ ಮಾಡುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಠಾಕ್ರೆ ಹೇಳಿದ್ದಾರೆ.