ಚೆನ್ನೈ : ತಮಿಳುನಾಡಿನಲ್ಲಿ (Tamilunadu) ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯಲ್ಲಿ ಡಿಎಂಕೆಯ ಹಿರಿಯ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ನೀಡಿದ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಮೌನವನ್ನು ಪ್ರಶ್ನಿಸಿ ಮಾತನಾಡುತ್ತಿದ್ದ ವೇಳೆ, ಸಭಿಕರಲ್ಲಿದ್ದ ಕೆಲವರು ನಟಿ ತ್ರಿಷಾ (Actress Trisha) ಅವರ ಹೆಸರನ್ನು ಕೂಗಿದ್ದರು. ಈ ವೇಳೆ ಉದಯನಿಧಿ ನೀಡಿದ ದ್ವಂದ್ವಾರ್ಥದ ಹೇಳಿಕೆ ಸಾರ್ವಜನಿಕ ರಂಗದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಈ ವಿವಾದಾತ್ಮಕ ಹೇಳಿಕೆಗೆ ತಕ್ಷಣವೇ ತಿರುಗೇಟು ನೀಡಿರುವ ನಟಿ ಹಾಗೂ ಬಿಜೆಪಿ (BJP) ನಾಯಕಿ ಖುಷ್ಬು ಸುಂದರ್ (khushbu Sundar), ಉದಯನಿಧಿ ಅವರ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಉದಯನಿಧಿ ಅವರ ಭಾಷಣವು ಕೀಳುಮಟ್ಟದ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂದು ಬಣ್ಣಿಸಿರುವ ಅವರು, ರಾಜಕೀಯ ಲಾಭಕ್ಕಾಗಿ ಮಹಿಳೆಯರನ್ನು ದಾಳವಾಗಿ ಬಳಸುವುದು ಖಂಡನೀಯ ಎಂದಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ನಟಿ ತ್ರಿಷಾ ಅವರಿಗೆ ಅಪಮಾನ ಎಸಗಿರುವುದಕ್ಕಾಗಿ ಉದಯನಿಧಿ ಅವರು ಶರತ್ತುರಹಿತವಾಗಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಖುಷ್ಬು, ರಾಜಕೀಯ ಎದುರಾಳಿಗಳ ಸಾಧನೆ, ದೃಷ್ಟಿಕೋನ ಹಾಗೂ ನಾಯಕತ್ವವನ್ನು ಸರಿಗಟ್ಟಲು ಸಾಧ್ಯವಾಗದಿದ್ದಾಗ ಇಂತಹ ವೈಯಕ್ತಿಕ ನಿಂದನೆ ಮತ್ತು ಅಸಭ್ಯ ಮಾತುಗಳ ಮೊರೆ ಹೋಗುವುದು ಕೆಟ್ಟ ರಾಜಕೀಯ ಸಂಸ್ಕೃತಿಯಾಗಿದೆ ಎಂದು ಚಾಟಿಯೇಟು ಬೀಸಿದ್ದಾರೆ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕ ಭಾಷಣಗಳಲ್ಲಿ ಕೆಲವು ಎಲ್ಲೆಗಳಿರಬೇಕು ಮತ್ತು ಪ್ರತಿಯೊಬ್ಬರೂ ಮಹಿಳೆಯರ ಗೌರವವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ವ್ಯಾನ್‌ನಿಂದಲೇ ಪ್ರತಿಕ್ರಿಯೆ ನೀಡಿರುವ ಉದಯನಿಧಿ, ತಾವು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸಿಲ್ಲ ಹಾಗೂ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ್ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಸೇರಿದಂತೆ ಹಲವು ಗಣ್ಯರು ಉದಯನಿಧಿ ಅವರ ಈ ಹೇಳಿಕೆಯನ್ನು ಖಂಡಿಸಿದ್ದು, ಸಾರ್ವಜನಿಕ ರಂಗದಲ್ಲಿ ಮಹಿಳೆಯರ ವಿರುದ್ಧದ ಇಂತಹ ಮಾತುಗಳು ಸಹನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಮಾಧ್ಯಮದ ತಪ್ಪು ಮಾಹಿತಿಯಿಂದ ನ್ಯಾಯಾಂಗದ ಮೇಲೆ ಒತ್ತಡ – ಸುಪ್ರೀಂ ಕೋರ್ಟ್ ಆತಂಕ