ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇಶ ಬಿಟ್ಟು ಪಲಾಯನ ಮಾಡಿರುವ ನೀರವ್ ಮೋದಿ, ಲಲಿತ್ ಮೋದಿಯನ್ನು ಟೀಕಿಸಿದರೆ, ಬಿಜೆಪಿಗೆ ನೋವಾಗುವುದು ಏಕೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ಉಳಿವಿಗಾಗಿ ರಾಹುಲ್ ಗಾಂಧಿ ಬೆನ್ನಿಗೆ ನಿಂತ ಎಲ್ಲ ವಿರೋಧ ಪಕ್ಷಗಳಿಗೂ ಧನ್ಯವಾದ ಹೇಳಿದ ಖರ್ಗೆ, “ಇದು ಕೇವಲ ಒಂದು ಸತ್ಯಾಗ್ರಹವಷ್ಟೇ. ಇಂತಹ ಸಾಕಷ್ಟು ಸತ್ಯಾಗ್ರಹಗಳು ದೇಶದುದ್ದಕ್ಕೂ ನಡೆಯಲಿವೆ. ನಾವು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ” ಎಂದು ಸವಾಲು ಹಾಕಿದ್ದಾರೆ.
ʼಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಒಬಿಸಿಯೇ? ಅವರೆಲ್ಲಾ ಜನರ ಹಣ ದೋಚಿ ದೇಶ ಬಿಟ್ಟು ಓಡಿದ್ದಾರೆ. ಪಲಾಯನ ಮಾಡಿರುವವರನ್ನು ಟೀಕಿಸಿದರೆ, ನೀವು (ಬಿಜೆಪಿ) ನೋಯುವುದು ಏಕೆ?. ಲೂಟಿ ಮಾಡಿದವರನ್ನು ಬಿಟ್ಟು, ದೇಶವನ್ನು ರಕ್ಷಿಸಲು ಹೊರಟ ವ್ಯಕ್ತಿಯನ್ನು ಏಕೆ ಶಿಕ್ಷಿಸುತ್ತೀರಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ದುರ್ಬಲವಾಗಿದೆ ಎಂದು ಅವರು ಭಾವಿಸಿದ್ದಾರೆ. ಯಾರಾದರೂ ತಮ್ಮ ದುರಹಂಕಾರದ ಮೂಲಕ ನಮ್ಮನ್ನು ಸೆದೆಬಡಿಯಲು ಪ್ರಯತ್ನಿಸಿದರೆ, ತಕ್ಕ ಉತ್ತರ ನೀಡುತ್ತೇವೆ ಎಂಬುದು ಅವರಿಗೆ ಗೊತ್ತಿರಲಿ ಎಂದು ಖರ್ಗೆ ಎಚ್ಚರಿಸಿದ್ದಾರೆ.