ನವದೆಹಲಿ: ಭಾರತ (India) ಮತ್ತು ಶ್ರೀಲಂಕಾದಲ್ಲಿ (Shri Lanka) ನಡೆಯಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ (Women’s Cricket World Cup) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಾಖಲೆಯ ಬಹುಮಾನ ಮೊತ್ತವನ್ನ (Prize Money) ಘೋಷಣೆ ಮಾಡಿದ್ದು, ಇದು ಪುರುಷರ ಕ್ರಿಕೆಟ್ ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತವನ್ನು ಮೀರಿಸಿದೆ ಎನ್ನಲಾಗಿದೆ.
USD 13.88 ಮಿಲಿಯನ್ ಬಹುಮಾನ
ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಈ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಎರಡು ಆತಿಥೇಯ ರಾಷ್ಟ್ರಗಳು ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಮೊದಲು ಆಟ ಆಡಲಿದೆ. 2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ $3.5 ಮಿಲಿಯನ್ ಬಹುಮಾನ ನೀಡಲಾಗಿತ್ತು, ಅದನ್ನ ಈಗ ಏರಿಕೆ ಮಾಡಿದ್ದು, ಶೇ.297 ರಷ್ಟು ಏರಿಕೆಯಾಗಿದೆ ಎಂದು ಐಸಿಸಿ ಸೋಮವಾರ ಮಾಹಿತಿ ನೀಡಿದೆ. ಇನ್ನು ಈ ಬಾರಿಯ ಒಟ್ಟು ಬಹುಮಾನದ ಮೊತ್ತವು ಎರಡು ವರ್ಷಗಳ ಹಿಂದೆ ಭಾರತದಲ್ಲಿ ನಡೆದಿದ್ದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಬಹುಮಾನದ ಮೊತ್ತವನ್ನು ಮೀರಿಸಿದೆ ಎನ್ನಲಾಗುತ್ತಿದ್ದು, ಪುರುಷರ ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ $10 ಮಿಲಿಯನ್ ಇತ್ತು.
ಮಹಿಳೆಯರ ಆಟದ ಬೆಳವಣಿಗೆ ಮಾಡುವ ಕಾರಣದಿಂದ, ಅದರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಐಸಿಸಿಯ ಯೋಜನೆಯ ಅನುಗುಣವಾಗಿ ಬಹುಮಾನದ ಹಣವನ್ನ ಹೆಚ್ಚಿಸಲಾಗಿದ್ದು, ಈ ಹಿಂದೆ 2024 ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ವೇತನ ಸಮಾನತೆಯನ್ನು ಪರಿಚಯಿಸುವ ನಿರ್ಧಾರವನ್ನು ಸಹ ಘೋಷಣೆ ಮಾಡಲಾಗಿತ್ತು.
ಯಾವೆಲ್ಲಾ ಸ್ಥಳಗಳಲ್ಲಿ ನಡೆಯಲಿದೆ ಪಂದ್ಯ?
ಭಾರತದ ಗುವಾಹಟಿ, ಇಂದೋರ್, ನವಿ ಮುಂಬೈ ಮತ್ತು ವಿಶಾಖಪಟ್ಟಣ ಹಾಗೂ ಶ್ರೀಲಂಕಾದ ಕೊಲಂಬೊ ಈ ಐದು ಪ್ರದೇಶಗಳಲ್ಲಿ 13 ಸೀಸನ್ ಪಂದ್ಯಗಳು ನಡೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ಗೆದ್ದವರು $4.48 ಮಿಲಿಯನ್ ಪಡೆಯಲಿದ್ದಾರೆ, ಇನ್ನು ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ತಂಡ ತಮ್ಮ ಏಳನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಾಗ ನೀಡಿದ್ದ $1.32 ಮಿಲಿಯನ್‌ಗಿಂತ ಶೇ. 239 ರಷ್ಟು ಹೆಚ್ಚು ಎನ್ನಲಾಗುತ್ತಿದೆ. ಇನ್ನು ಈ ಬಾರಿಯ ರನ್ನರ್ ಅಪ್ ತಂಡವು $2.24 ಮಿಲಿಯನ್ ಬಹುಮಾನ ಪಡೆಯಲಿದ್ದು, ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ಗೆದ್ದಿದ್ದ $600,000 ಮೊತ್ತಕ್ಕೆ ಹೋಲಿಸಿದರೆ ಇದು ಶೇಕಡಾ 273 ರಷ್ಟು ಹೆಚ್ಚಾಗಿದೆ. ಹಾಗೆಯೇ, ಸೆಮಿಫೈನಲಿಸ್ಟ್ ಆಗಿ ಸೋತು ಮನೆಗೆ ಹೋಗುವ ಎರಡೂ ತಂಡಗಳಿಗೆ ತಲಾ $1.12 ಮಿಲಿಯನ್ ನೀಡಲಾಗುತ್ತದೆ.
ಪ್ರತಿ ಪಂದ್ಯದ ಗೆಲುವಿಗೆ, ವಿಜೇತರು $34,314 ಪಡೆಯುತ್ತಾರೆ. ಐದನೇ ಮತ್ತು ಆರನೇ ಸ್ಥಾನ ಪಡೆಯುವ ತಂಡಗಳು ತಲಾ $700,000 ಗಳಿಸುತ್ತವೆ ಮತ್ತು ಏಳನೇ ಮತ್ತು ಎಂಟನೇ ಸ್ಥಾನದಲ್ಲಿರುವ ತಂಡಗಳು $280,000 ಗಳಿಸುತ್ತವೆ. ಭಾಗವಹಿಸುವ ಪ್ರತಿಯೊಂದು ತಂಡಕ್ಕೂ $250,000 ಹಣ ಸಿಗಲಿದೆ ಎನ್ನಲಾಗಿದೆ.
ವಿಶ್ವ ಸಂಸ್ಥೆಯು ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡುತ್ತಿರುವುದರಿಂದ ಇದು ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಈ ಬಹುಮಾನದ ಘೋಷಣೆಯು ಮಹಿಳಾ ಕ್ರಿಕೆಟ್‌ನ ಪ್ರಯಾಣದಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ. ಬಹುಮಾನದ ಮೊತ್ತದಲ್ಲಿ ಈ ನಾಲ್ಕು ಪಟ್ಟು ಹೆಚ್ಚಳವು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತಿನ ಕ್ಷಣವಾಗಿದೆ ಮತ್ತು ಅದರ ದೀರ್ಘಕಾಲೀನ ಬೆಳವಣಿಗೆಗೆ ಸ್ಪಷ್ಟ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಯ್ ಶಾ ಹೇಳಿದ್ದಾರೆ.
ಇದನ್ನೂ ಓದಿ : ನಾವು ಬರತೀವಿನ್ನು ನೆನಪಿರಲಿ – ಐಪಿಎಲ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆರ್. ಅಶ್ವಿನ್!