ಬೆಂಗಳೂರು: ನಾನು ಎಲ್ಲಿಯೂ ನೇರವಾಗಿ 40% ಕಮಿಷನ್ ತೆಗೆದುಕೊಳ್ಳುತ್ತಾರೆ ಅಂತ ಹೇಳಿಲ್ಲ. ರಾಮದುರ್ಗದಲ್ಲಿ ಯಡಿಯೂರಪ್ಪ 2,500 ಕೋಟಿ ರೂ. ಕೊಟ್ಟು ಮುಖ್ಯಮಂತ್ರಿಯಾಗಿದ್ದರು ಅಂತ ಹೇಳಿರುವ ವಿಚಾರ ಬಿಜೆಪಿ ಆಗಲಿ, ಕಾಂಗ್ರೆಸ್ ಪರವಾಗಿ ಆಗಲಿ ಮಾತನಾಡಿಯೇ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಇದೇ ವಾರ ದೆಹಲಿಯಿಂದ ಕರೆ ಬಂದಿತ್ತು ಯಾರೋ ಮಹರಾಜ್ ಎಂಬುವವರಿಂದ. ನಿಮ್ಮನ್ನು ರಾಜ್ಯಾಧ್ಯಕ್ಷ ಮಾಡುತ್ತೇವೆ, ನಮಗೆ ಜೆಪಿ ನಡ್ಡಾ ತುಂಬಾ ಆತ್ಮೀಯರು ಎಂದು ಹೇಳಿದ್ದರು. ಇಂತಹ ಆಮಿಷಗಳನ್ನು ನಂಬಬೇಡಿ ಎಂದು ನಾನೇ ಹೇಳುತ್ತೇನೆ. ರಾಜ್ಯದಲ್ಲೂ ಕೆಲವು ದಲ್ಲಾಳಿಗಳಿದ್ದಾರೆ. ನಾವು ಅಮಿತ್ ಶಾ ಅವರೊಂದಿಗೆ ಮಾತನಾಡಲು ಅಪಾಯಿಂಟ್‌ಮೆಂಟ್ ಕೊಡುತ್ತೇವೆ, ಸೋನಿಯಾ ಗಾಂಧಿ ಅವರ ಅಪಾಯಿಂಟ್‌ಮೆಂಟ್ ಕೊಡಿಸುತ್ತೇವೆ ಎನ್ನುತ್ತಾರೆ ಎಂದರು.
ಈ ರೀತಿಯಾಗಿ ನಾನು ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಬಳಿ ಹೇಳಿದ್ದು. ಅದರ ರೆಕಾರ್ಡ್ ಇದೆ. ಇದನ್ನು ಬೇಕಿದ್ರೆ ಸಿಬಿಐಗೆ ಕೊಡಲಿ. ಯಡಿಯೂರಪ್ಪ 2,500 ಕೋಟಿ ರೂ. ಕೊಟ್ಟು ಸಿಎಂ ಆಗಿದ್ದಾರೆ ಎಂದು ಹೇಳಿದ್ದೇನೆಂದು ಆರೋಪ ಮಾಡುತ್ತಿದ್ದಾರೆ. ಆದರೆ ಅಂದು ನಾನು ಹಾಗೂ ಡಿಕೆಶಿ ನಡುವೆ ಆಗಿರುವ ಚರ್ಚೆ ಇದೇ ವಿಚಾರವಾಗಿ ಎಂದು ಸ್ಪಷ್ಟಪಡಿಸಿದರು.
ಆದರೆ ನಾನು ಯಡಿಯೂರಪ್ಪ ಅವರ ಮಗ ವಿಜಯೇಂದ್ರ ನಕಲಿ ಸಹಿ ಮಾಡಿದ್ದಾರೆಂದು ಆಗಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಅದರಿಂದ ನಾನು ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪಗಳಿಂದ ನಾನು ಹಿಂದೆ ಸರಿಯಲ್ಲ. ಈ ವಿಚಾರ ಸ್ಪಷ್ಟವಾಗಿದೆ. ಅವರು ಏನೇನು ಮಾಡಿದ್ದಾರೆ, ನಮ್ಮ ಕ್ಷೇತ್ರಕ್ಕೆ ಅನ್ಯಾಯ ಮಾಡಿರುವ ವಿಚಾರದಲ್ಲಿ ನಾನು ಇನ್ನೂ ಕೂಡಾ ಗಟ್ಟಿಯಾಗಿದ್ದೇನೆ ಎಂದು ಹೇಳಿದರು.