ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಾರು ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವಂತಹ ಆಗಾತಕಾರಿ ಘಟನೆ ಮಂಗಳವಾರ ರಾತ್ರಿ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕೊಲ್ಲಂನ ಚೆಮ್ಮಮುಕ್ಕು ಎಂಬಲ್ಲಿ ಪದ್ಮರಾಜನ್ (60) ಎಂಬಾತ ತನ್ನ ಪತ್ನಿ ಅನಿಲಾ (44) ಅವರನ್ನು ತನ್ನ ಕಾರಿನೊಳಗೆ ಬೆಂಕಿ ಹಚ್ಚಿ ನಡುರಸ್ತೆಯಲ್ಲಿ ಕೊಂದಿದ್ದಾನೆ. ಘಟನೆ ವೇಳೆ ಮಹಿಳೆ ತನ್ನ ಬೇಕರಿಯಲ್ಲಿ ಕೆಲಸಕ್ಕಿದ್ದ ಸೋನಿ (33) ಜೊತೆ ಪ್ರಯಾಣಿಸುತ್ತಿದ್ದಳು. ಸದ್ಯ ಸೋನಿಗೆ ಕೆಲವು ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯದ ಬಳಿಕ ಆರೋಪಿ ಪದ್ಮರಾಜನ್ ಕೊಲ್ಲಂ ಪೂರ್ವ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲೀಸರ ಪ್ರಕಾರ ಅನಿಲಾ ತನ್ನ ಪ್ರಿಯಕರನೊಂದಿಗೆ ಪ್ರಯಾಣಿಸುತ್ತಿದ್ದಾಳೆ ಎಂದು ಭಾವಿಸಿ ಪತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ. ಅನಿಲಾ ನಗರದ ಶಂಕರ ಆಸ್ಪತ್ರೆ ಬಳಿ ಅನೀಶ್ ಎಂಬುವವರ ಜೊತೆ ಪಾರ್ಟ್ನರ್ ಶಿಪ್‌ನಲ್ಲಿ ಬೇಕರಿ ನಡೆಸುತ್ತಿದ್ದಳು. ಆದರೆ ಇದು ಪತಿ ಪದ್ಮರಾಜನ್‌ಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆ ಅನೀಶ್ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸುವಂತೆ ಪತ್ನಿಗೆ ಮನವಿ ಮಾಡಿದ್ದ. ಆಗ ಅನೀಶ್ ಬೇಕರಿಗೆ ಹೂಡಿದ್ದ ಸುಮಾರು ಒಂದೂವರೆ ಲಕ್ಷ ರೂ. ಕೊಡುವಂತೆ ಕೇಳಿದ್ದ. ಇದಕ್ಕೆ ಪದ್ಮರಾಜನ್ ಒಪ್ಪಿಕೊಂಡಿದ್ದ.
ಹಣ ಪಡೆದ ಬಳಿಕವೂ ಅನೀಶ್ ಅನಿಲಾ ಜೊತೆಗೆ ಭೇಟಿಯಾಗುವುದನ್ನು ಬಿಟ್ಟಿರಲಿಲ್ಲ. ಇದು ಪದ್ಮರಾಜನ್ ಅವರನ್ನು ಕೆರಳಿಸಿದ್ದು, ಇಬ್ಬರನ್ನೂ ಒಟ್ಟಿಗೆ ಕೊಲ್ಲಲು ನಿರ್ಧರಿಸಿದ್ದ. ಮಂಗಳವಾರ ರಾತ್ರಿ ಬೇಕರಿ ಮುಚ್ಚಿ, ಅನಿಲಾ ಕೆಲಸಕ್ಕಿದ್ದ ಸೋನಿ ಜೊತೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಪದ್ಮರಾಜನ್ ಸೋನಿಯನ್ನು ಅನೀಶ್ ಎಂದು ಭಾವಿಸಿ, ಅವರಿಬ್ಬರನ್ನು ಹಿಂಬಾಲಿಸಿದ್ದಾನೆ.
ಪದ್ಮರಾಜನ್ ಕ್ರಿಸ್ಟ್ ರಾಜ್ ಹೈಯರ್ ಸೆಕೆಂಡರಿ ಶಾಲೆಯ ಮುಂದೆ ಅವರ ಕಾರನ್ನು ನಿಲ್ಲಿಸಿ, ಬಕೆಟ್ ನಲ್ಲಿ ತಂದಿದ್ದ ಪೆಟ್ರೋಲ್ ಅನ್ನು ಕಾರಿನ ಕಿಟಕಿಯಿಂದ ಎರಚಿ, ಇಬ್ಬರಿಗೂ ಬೆಂಕಿ ಹಚ್ಚಿ ಸ್ಥಳದಿಂದ ಓಡಿ ಹೋಗಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿ, ಕೃತ್ಯದ ಹಿನ್ನೆಲೆಯನ್ನು ವಿವರಿಸಿದ್ದಾನೆ.
ಇತ್ತ ಬೆಂಕಿಯಲ್ಲಿ ಎರಡೂ ಕಾರುಗಳು ಸುಟ್ಟು ಕರಕಲಾಗಿವೆ. ಸುತ್ತಮುತ್ತಲಿನ ಜನರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸೋನಿ ಸಣ್ಣಪುಟ್ಟ ಸುಟ್ಟ ಗಾಯಗಳಿಂದ ಬಚಾವಾದರೂ ಅನಿಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊನೆಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಅನಿಲಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾರಿಪ್ಪಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಸೋನಿ ಅವರ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.