Monday, August 17, 2026
Homeಆಧ್ಯಾತ್ಮGowri Ganesha Festival: ಸ್ವರ್ಣಗೌರಿ ಹಬ್ಬಕ್ಕೆ ನೀಡುವ ಬಾಗಿನದ ಮಹತ್ವವೇನು..? ಅದು ಹೇಗಿರಬೇಕು..? ಏನೆಲ್ಲಾ ವಸ್ತುವಿರಬೇಕು..?

Gowri Ganesha Festival: ಸ್ವರ್ಣಗೌರಿ ಹಬ್ಬಕ್ಕೆ ನೀಡುವ ಬಾಗಿನದ ಮಹತ್ವವೇನು..? ಅದು ಹೇಗಿರಬೇಕು..? ಏನೆಲ್ಲಾ ವಸ್ತುವಿರಬೇಕು..?

ಅದೆಷ್ಟೇ ಬಡತನವಿದ್ದರೂ, ಗೌರಿಹಬ್ಬಕ್ಕೆ ಮಗಳಿಗೆ ಉಡುಗೊರೆ ಕೊಡಲು ಹೆತ್ತವರು ಆಸೆಪಡುತ್ತಾರೆ. ಹೀಗೆ ದೊರಕಿದ ಕಾಣಿಕೆ ಯಾವುದೇ ಆಗಿದ್ದರೂ, ಅದನ್ನು ಕಣ್ಣಿಗೆ ಒತ್ತಿಕೊಂಡು ಹೆಣ್ಮಕ್ಕಳು ಸಂಭ್ರಮಿಸುತ್ತಾರೆ. ಹಬ್ಬಕ್ಕೆ ಕರೆಯಲು ಅಣ್ಣನೋ/ಅಪ್ಪನೋ ಬಂದಾಗಂತೂ ಜಗವ ಗೆದ್ದ ಖುಷಿ!

ಅದರಲ್ಲೂ ತಾಯಿ ಮನೆಯಿಂದ ಬಾಗಿನ ಪಡೆಯುವುದೆಂದರೆ ಸ್ವರ್ಗಕ್ಕೆ ಮೂರೇ ಗೇಣು. ಈ ದಿನ ಮನೆ ಮಗಳಿಗೆ ತನ್ನ ತಾಯಿ,  ಬಾಗಿನ ನೀಡಿ, ಅರಿಶಿನ, ಕುಂಕುಮವನ್ನು ನೀಡಿ ಆಶೀರ್ವಾದ ನೀಡುತ್ತಾರೆ.

ಮೊದಲೇ ಹೇಳಿದಂತೆ ಈ ದಿನ ಬಾಗಿನ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮೊರದ ಬಾಗಿನ ಕೊಡುವುದನ್ನ ನೋಡಿರುತ್ತೇವೆ. ಅದರಲ್ಲಿ ಏನಿರುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ, ಇನ್ನೂ ಕೆಲವರಿಗೆ ಈ ವಿಚಾರದಲ್ಲಿ ಬಹಳ ಗೊಂದಲವಿದೆ. ಹಾಗಾಗಿ ಮೊರದ ಬಾಗಿನದ ಮಹತ್ವವೇನು..? ಅದರಲ್ಲಿ ಏನೆಲ್ಲಾ ವಸ್ತು ನೀಡಬೇಕು..? ಬಾಗಿನ ಕೊಡುವ ವಿಧಾನವೇಗೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಬಾಗಿನದ ಮಹತ್ವವೇನು?

ಬಾಗಿನ ಎಂದರೆ ಇತರರಿಗೆ ಸಮೃದ್ಧಿ, ನೆಮ್ಮದಿಯನ್ನು ಹಾರೈಸುತ್ತಾ ನೀಡುವ ಪ್ರೀತಿಯ ಉಡುಗೊರೆ ಎಂದು ಹೇಳಬಹುದು. ಪ್ರತಿ ವರ್ಷ ಗೌರಿ ಹಬ್ಬದಲ್ಲಿ ಮುತ್ತೈದೆಯರಿಗೆ ಬಾಗಿನ ನೀಡುವುದು ವಾಡಿಕೆ. ಶಿವನನ್ನು ವರಿಸಿ ಕೈಲಾಸ ಪರ್ವತದಲ್ಲಿ ನೆಲೆಸಿರುವ ಗೌರಿಯು ವರ್ಷಕ್ಕೆ ಒಮ್ಮೆ, ಅಂದರೆ ಬಾಧ್ರಪದ ಮಾಸದ ತದಿಗೆ ದಿನ ತವರು ಮನೆಗೆ (ಭೂಮಿಗೆ) ಬರುತ್ತಾಳೆ. ಹಾಗೆ ಬಂದ ಮನೆ ಮಗಳಿಗೆ ಸತ್ಕಾರ ಮಾಡಿ, ವಾಪಸ್‌ ಗಂಡನ ಮನೆಗೆ ಹೋಗುವಾಗ ದವಸ ಧಾನ್ಯ, ಅರಿಶಿನ, ಕುಂಕುಮ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಾಗಿನ ಕೊಟ್ಟು ಕಳಿಸಲಾಗುತ್ತದೆ. ಸಂಪತ್ತು, ಉತ್ತಮ ಆರೋಗ್ಯ, ಸುಖ, ಶಾಂತಿ, ನೆಮ್ಮದಿಯಾಗಿ, ಮುತ್ತೈದೆಯಾಗಿ ಬಾಳುವಂತೆ ಹಾರೈಸಲಾಗುತ್ತದೆ. ಬಾಗಿನವನ್ನು ಸಾಮಾನ್ಯವಾಗಿ ಬಿದಿರಿನ ಮೊರದಲ್ಲಿ ನೀಡಲಾಗುತ್ತದೆ.

ಬಾಗಿನ ನೀಡಲು ಹೊಸ ಮೊರಗಳನ್ನು ಬಳಸಲಾಗುತ್ತದೆ. ಮೊರವನ್ನು ಲಕ್ಷ್ಮೀಗೆ ಹೋಲಿಸಲಾಗುತ್ತದೆ. ಇದರಲ್ಲಿ ವಿವಿಧ ಸಾಮಗ್ರಿಗಳನ್ನು ಇಟ್ಟು, ಅದರ ಮೇಲೆ ಮತ್ತೊಂದು ಮೊರವನ್ನು ಇಟ್ಟು ಹಳದಿ ದಾರವನ್ನು ಸುತ್ತಿ ಕಟ್ಟಲಾಗುತ್ತದೆ.

ಬಾಗಿನದಲ್ಲಿ ಏನೆಲ್ಲಾ ವಸ್ತುಗಳಿರಬೇಕು?

ಅರಿಶಿನ-ಗೌರಿ

ಕುಂಕುಮ-ಮಹಾ ಲಕ್ಷ್ಮಿ

ಸಿಂಧೂರ- ಸರಸ್ವತಿ

ಕನ್ನಡಿ-ರೂಪ ಲಕ್ಷ್ಮಿ

ತೊಗರಿಬೇಳೆ-ವರ ಲಕ್ಷ್ಮಿ

ಉದ್ದಿನಬೇಳೆ-ಸಿದ್ದ ಲಕ್ಷ್ಮಿ

ಅಡಿಕೆ-ಇಷ್ಟ ಲಕ್ಷ್ಮಿ

ಹಣ್ಣುಗಳು – ಜ್ಞಾನಲಕ್ಷ್ಮಿ

ಬೆಲ್ಲ- ರಸಲಕ್ಷ್ಮಿ

ಹೆಸರು ಬೇಳೆ – ವಿದ್ಯಾಲಕ್ಷ್ಮಿ

ವಸ್ತ್ರ – ವಸ್ತ್ರಲಕ್ಷ್ಮಿ

ತೆಂಗಿನಕಾಯಿ – ಸಂತಾನ ಲಕ್ಷ್ಮಿ

ವೀಳ್ಯದ ಎಲೆ – ಧನ ಲಕ್ಷ್ಮಿ

ಬಾಚಣಿಗೆ – ಶೃಂಗಾರ ಲಕ್ಷ್ಮಿ

ಕಾಡಿಗೆ – ಲಜ್ಜಾ ಲಕ್ಷ್ಮಿ

ಅಕ್ಕಿ – ಶ್ರೀ ಲಕ್ಷ್ಮಿ

ಹೀಗೆ ಮೊರದಲ್ಲಿ ಇಡುವ ಒಂದೊಂದು ವಸ್ತುಗಳನ್ನೂ ಒಂದೊಂದು ದೇವತೆಗಳಿಗೆ ಹೋಲಿಸಲಾಗುತ್ತದೆ.

ಬಾಗಿನ ಕೊಡುವ ವಿಧಾನ

ಪೂಜೆಗೂ ಮುನ್ನವೇ ಬಾಗಿನವನ್ನು ಸಿದ್ಧತೆ ಮಾಡಿಕೊಂಡು ಅದನ್ನು ದೇವಿಯ ಮುಂದೆ ಇಟ್ಟು ಹೂ, ಅಕ್ಷತೆ ಹಾಕಿ ಪೂಜೆ ಮಾಡಬೇಕು ಪೂಜೆ ಮುಗಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹಚ್ಚಿ, ಹೂ, ತಾಂಬೂಲ ನೀಡಬೇಕು. ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕೂರಿಸಬೇಕು. ನಂತರ ಸೀರೆ ಸೆರಗಿನಿಂದ ಹಿಡಿದು ಬಾಗಿನ ಕೊಡಬೇಕು, ಬಾಗಿನ ಪಡೆಯುವವರು ಕೂಡಾ ಸೀರೆ ಸೆರಗನ್ನು ಹಿಡಿದು ಬಾಗಿನ ಪಡೆಯಬೇಕು.ಈ ಸಮಯದಲ್ಲಿ ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ, ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌ ಎಂಬ ಮಂತ್ರವನ್ನು ಹೇಳಿದರೆ ಒಳ್ಳೆಯದು. ಕೆಲವೆಡೆ ಬಾಗಿನ ಕೊಡುವವರು ಮುತ್ತೈದೆ ಮುತ್ತೈದೆ ಬಾಗಿನ ತಗೋ ಎಂದರೆ ಪಡೆಯುವವರು ಸಾವಿತ್ರಿ ಸಾವಿತ್ರಿ ಬಾಗಿನ ಕೊಡು ಎಂದು ಹೇಳುತ್ತಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!