ವಾಷಿಂಗ್ಟನ್: “ಯಾರಿಗೆ ಭಯವಿಲ್ಲವೋ ಆ ಯುವಕರೆಲ್ಲಾ ಬನ್ನಿ… ನಮ್ಮ ಹೈದರಾಲಿ ಹಡಗನ್ನು ಹತ್ತಿ!” — ಈ ಹಾಡಿನ ಸಾಲುಗಳು ಮೊಳಗಿದ್ದು ಮೈಸೂರಿನ ಬೀದಿಗಳಲ್ಲಲ್ಲ, ಬದಲಿಗೆ ಅಮೆರಿಕದ(America) ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಫಿಲಡೆಲ್ಫಿಯಾದ ರಸ್ತೆಗಳಲ್ಲಿ! ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತಿದ್ದ ಅಮೆರಿಕನ್ನರಿಗೆ ಮೈಸೂರಿನ ದೊರೆ ಹೈದರಾಲಿ(Hyder Ali) ಮತ್ತು ಅವರ ಪುತ್ರ ಟಿಪ್ಪು ಸುಲ್ತಾನ್(Tipu Sultan) ಬ್ರಿಟಿಷ್ ವಿರೋಧಿ ಹೋರಾಟದ ದೊಡ್ಡ ಸಂಕೇತವಾಗಿದ್ದರು. ಅಷ್ಟೇ ಅಲ್ಲದೆ, ಅಮೆರಿಕನ್ನರು ತಮ್ಮ ಯುದ್ಧನೌಕೆಯೊಂದಕ್ಕೆ ‘ಹೈದರಾಲಿ’ ಎಂದೇ ಹೆಸರಿಟ್ಟಿದ್ದರು.
ಅಮೆರಿಕವು ತನ್ನ 250ನೇ ಸ್ವಾತಂತ್ರ್ಯದ ವರ್ಷಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, 18ನೇ ಶತಮಾನದ ಉತ್ತರಾರ್ಧದ ಈ ರೋಚಕ ಹಾಗೂ ಮರೆತುಹೋದ ಇತಿಹಾಸದ ಪುಟಗಳು ಮುಂಚೂಣಿಗೆ ಬಂದಿವೆ.
ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದ ಇಬ್ಬರು ಶತ್ರುಗಳು!
ಅಮೆರಿಕದಲ್ಲಿ ಜಾರ್ಜ್ ವಾಷಿಂಗ್ಟನ್ ಅವರು ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ದಕ್ಷಿಣ ಭಾರತದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಸಾರಿದ್ದರು. ವಾಷಿಂಗ್ಟನ್ ಮತ್ತು ಹೈದರಾಲಿ ನಡುವೆ ಯಾವುದೇ ಪತ್ರವ್ಯವಹಾರ ನಡೆದಿರಲಿಲ್ಲ ಅಥವಾ ಮೈಸೂರು ಪಡೆಗಳು ಅಮೆರಿಕಕ್ಕೆ ಹೋಗಿರಲಿಲ್ಲ. ಆದರೆ, ಬ್ರಿಟನ್ ಅನ್ನು ಹೇಗಾದರೂ ಮಾಡಿ ಮಣಿಸಲೇಬೇಕು ಎಂದು ಪಣತೊಟ್ಟಿದ್ದ ಫ್ರಾನ್ಸ್ ದೇಶವು ಈ ಇಬ್ಬರು ನಾಯಕರಿಗೂ ಏಕಕಾಲದಲ್ಲಿ ಬೆಂಬಲ ನೀಡುವ ಮೂಲಕ ಇವರಿಬ್ಬರನ್ನೂ ಒಂದು ರಂಗಕ್ಕೆ ತಂದು ನಿಲ್ಲಿಸಿತು.
ಅಮೆರಿಕದ ಬೋಸ್ಟನ್ ಟೀ ಪಾರ್ಟಿಗೆ ಕಾರಣವಾಗಿದ್ದ ಬ್ರಿಟನ್‌ನ ಅದೇ ಈಸ್ಟ್ ಇಂಡಿಯಾ ಕಂಪನಿಯು, ಭಾರತದಲ್ಲಿ ಮೈಸೂರಿನ ವಿರುದ್ಧ ಭಾರಿ ವೆಚ್ಚದ ಯುದ್ಧದಲ್ಲಿ ತೊಡಗಿತ್ತು. ಫ್ರೆಂಚ್ ನೌಕಾಪಡೆಗಳು ಮತ್ತು ಹಣಕಾಸು ನೆರವು ಒಂದೆಡೆ ವಾಷಿಂಗ್ಟನ್‌ನ ಕ್ರಾಂತಿಕಾರಿಗಳಿಗೆ ಸಿಕ್ಕರೆ, ಮತ್ತೊಂದೆಡೆ ಹೈದರಾಲಿಯ ಸೈನ್ಯಕ್ಕೆ ಲಭ್ಯವಾಯಿತು. ಇದರಿಂದಾಗಿ ಬ್ರಿಟನ್ ಏಕಕಾಲದಲ್ಲಿ ಹಲವು ದೇಶಗಳಲ್ಲಿ ಹೋರಾಡಬೇಕಾದ ಅನಿವಾರ್ಯತೆ ಎದುರಾಯಿತು.
ಬ್ರಿಟನ್‌ಗೆ ಅತಿ ದೊಡ್ಡ ತಲೆನೋವಾದ ಮೈಸೂರು
1770ರ ದಶಕದ ಕೊನೆಯಲ್ಲಿ ಬ್ರಿಟನ್ ಭಾರತದಲ್ಲಿ ಪ್ಲಾಸಿ ಮತ್ತು ಬಕ್ಸರ್ ಕದನಗಳ ನಂತರ ತನ್ನ ಅಧಿಕಾರವನ್ನು ಗಟ್ಟಿಗೊಳಿಸುತ್ತಿತ್ತು. ಇದೇ ಸಮಯದಲ್ಲಿ ಅಮೆರಿಕದ 13 ವಸಾಹತುಗಳು ಬ್ರಿಟನ್ ವಿರುದ್ಧ ದಂಗೆ ಎದ್ದಿದ್ದವು. 1778ರಲ್ಲಿ ಫ್ರಾನ್ಸ್ ಅಮೆರಿಕದ ಪರವಾಗಿ ಯುದ್ಧಕ್ಕೆ ಧುಮುಕಿದಾಗ ಇದು ಜಾಗತಿಕ ಸಂಘರ್ಷವಾಗಿ ಬದಲಾಯಿತು. ಭಾರತದಲ್ಲಿ ಇದರ ಫ್ಲ್ಯಾಶ್ ಪಾಯಿಂಟ್ (Flashpoint) ಆಗಿದ್ದು ಮೈಸೂರು.
1779ರಲ್ಲಿ ಬ್ರಿಟನ್ ಪಡೆಗಳು ಫ್ರೆಂಚ್ ನಿಯಂತ್ರಣದಲ್ಲಿದ್ದ ಮಾಹೆ (Mahe) ಬಂದರನ್ನು ವಶಪಡಿಸಿಕೊಂಡವು. ಈ ಬಂದರು ಹೈದರಾಲಿಗೆ ಅತ್ಯಂತ ಪ್ರಮುಖವಾಗಿತ್ತು, ಏಕೆಂದರೆ ಫ್ರಾನ್ಸ್‌ನಿಂದ ಮಿಲಿಟರಿ ಸಾಮಗ್ರಿಗಳನ್ನು ಅವರು ಇದೇ ಬಂದರಿನ ಮೂಲಕ ಪಡೆಯುತ್ತಿದ್ದರು. ಬ್ರಿಟಿಷರ ಈ ದಾಳಿಯಿಂದ ಕೆರಳಿದ ಹೈದರಾಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು (1780-1784) ಆರಂಭಿಸಿದರು. ಇತ್ತ ಬ್ರಿಟನ್ ಅಮೆರಿಕವನ್ನು ರಕ್ಷಿಸಿಕೊಳ್ಳಬೇಕೋ ಅಥವಾ ಭಾರತದಲ್ಲಿನ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬೇಕೋ ಎಂಬ ಸಂದಿಗ್ಧತೆಗೆ ಸಿಲುಕಿ, ತನ್ನ ಸೈನ್ಯ ಮತ್ತು ಸಂಪತ್ತನ್ನು ವಿಭಜಿಸಬೇಕಾಯಿತು.
ಪೊಲ್ಲಿಲೂರ್ ಕದನ ಮತ್ತು ಅಮೆರಿಕದಲ್ಲಿ ಹೈದರಾಲಿ ಜಯಘೋಷ!
ಜಾರ್ಜ್ ವಾಷಿಂಗ್ಟನ್ ಮತ್ತು ಹೈದರಾಲಿ ಇಬ್ಬರೂ ಒಬ್ಬನೇ ಶತ್ರುವಿನ ವಿರುದ್ಧ ಹೋರಾಡುತ್ತಿದ್ದರು ಮತ್ತು ಇಬ್ಬರಿಗೂ ಫ್ರಾನ್ಸ್ ಎಂಬ ಸಾಮಾನ್ಯ ಮಿತ್ರನಿದ್ದನು. 1780ರಲ್ಲಿ ನಡೆದ ಪ್ರಸಿದ್ಧ ಪೊಲ್ಲಿಲೂರ್ ಕದನದಲ್ಲಿ (ಈಗಿನ ತಮಿಳುನಾಡಿನ ಕಾಂಚೀಪುರಂ ಬಳಿ) ಹೈದರಾಲಿ ನೇತೃತ್ವದ ಮೈಸೂರು ಪಡೆಗಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಇತಿಹಾಸದಲ್ಲೇ ಅತ್ಯಂತ ಹೀನಾಯವಾದ ಸೋಲನ್ನು ಉಣಿಸಿದವು.
ಈ ಗೆಲುವು ಅಮೆರಿಕದಲ್ಲೂ ಭಾರಿ ಸಂಚಲನ ಮೂಡಿಸಿತು. ಅಕ್ಟೋಬರ್ 24, 1781 ರಂದು ನ್ಯೂಜೆರ್ಸಿಯ ಟ್ರೆಂಟನ್‌ನಲ್ಲಿ ಜಾರ್ಜ್ ವಾಷಿಂಗ್ಟನ್ ಅವರ ಯಾರ್ಕ್‌ಟೌನ್ ವಿಜಯ ಮತ್ತು ಭಾರತದಲ್ಲಿ ಹೈದರಾಲಿ ಸಾಧಿಸಿದ ವಿಜಯಗಳನ್ನು ಅಮೆರಿಕನ್ನರು ಒಟ್ಟಿಗೆ ಆಚರಿಸಿದರು. ಅಂದು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ 13 ಸಾಂಪ್ರದಾಯಿಕ ಟೋಸ್ಟ್‌ಗಳನ್ನು (ಗೌರವಾರ್ಪಣೆ) ಪ್ರಕಟಿಸಲಾಯಿತು. ಅದರಲ್ಲಿ 11ನೇ ಟೋಸ್ಟ್ ಅನ್ನು “ಪೂರ್ವ ಭಾರತದಲ್ಲಿ ಬ್ರಿಟನ್‌ನ ಹಮ್ಮನ್ನು ಮುರಿದು, ಅದರ ಶಕ್ತಿಯನ್ನು ಕುಗ್ಗಿಸಲು ದೈವಪ್ರೇರಿತರಾಗಿ ಎದ್ದು ನಿಂತಿರುವ ಮಹಾನ್ ಮತ್ತು ವೀರ ಹೈದರಾಲಿ” ಅವರಿಗೆ ಸಮರ್ಪಿಸಲಾಗಿತ್ತು.
ಮೈಸೂರು ಯುದ್ಧಗಳು ಅಮೆರಿಕಕ್ಕೆ ನೇರವಾಗಿ ಸ್ವಾತಂತ್ರ್ಯ ತಂದುಕೊಡದಿದ್ದರೂ, ಬ್ರಿಟನ್ ತನ್ನ ಸೈನಿಕರು, ಹಣ ಮತ್ತು ಹಡಗುಗಳನ್ನು ಭಾರತದ ಕಡೆಗೂ ನಿಯೋಜಿಸುವಂತೆ ಮಾಡಿತು. ಈ ಬಹುಮುಖಿ ಒತ್ತಡವೇ ಅಂತಿಮವಾಗಿ ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮದ ಯಶಸ್ಸಿಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು ಎಂದು ಇತಿಹಾಸಕಾರರು ಒಪ್ಪಿಕೊಳ್ಳುತ್ತಾರೆ.