ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬ್ಲಿಂಕಿಟ್ ಮತ್ತು ಇನ್ಸ್ಟಾಮಾರ್ಟ್‌ನಂತಹ ಆಪ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಬೆರಳ ತುದಿಯಲ್ಲಿ ಬೇಕಾದ ವಸ್ತುಗಳು ನಿಮಿಷಾರ್ಧದಲ್ಲಿ ಮನೆ ಬಾಗಿಲಿಗೆ ಬರುವುದು ಎಷ್ಟು ಸುಲಭವೋ, ಅಷ್ಟೇ ಅಪಾಯಕಾರಿ ಕೂಡ. ಕೇವಲ 30 ದಿನಗಳ ಕಾಲ ಈ ಆಪ್‌ಗಳನ್ನು ಬಳಸುವುದನ್ನು ನಿಲ್ಲಿಸಿದ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು,(Bengaluru) ಇದು ನಮ್ಮ ಅತಿಯಾದ ಅವಲಂಬನೆಯ ಮೇಲೆ ಬೆಳಕು ಚೆಲ್ಲುವಂತಿದೆ.
30 ದಿನಗಳ ಕಾಲ ಡಿಲೀಟ್ ಮಾಡಲು ನಿರ್ಧಾರ
ದಿನನಿತ್ಯ ಸಣ್ಣಪುಟ್ಟ ವಸ್ತುಗಳಿಗೂ ಆನ್ಲೈನ್ ಆಪ್‌ಗಳನ್ನು ಅವಲಂಬಿಸಿದ್ದ ಆ ವ್ಯಕ್ತಿ, ಈ ಅಭ್ಯಾಸವನ್ನು 30 ದಿನಗಳ ಕಾಲ ತ್ಯಜಿಸಲು ನಿರ್ಧರಿಸಿದರು. ಇದರ ಫಲವಾಗಿ ಅವರಿಗೆ ಆಶ್ಚರ್ಯಕರ ಸಂಗತಿಗಳು ತಿಳಿದುಬಂದಿವೆ. ಸಾಮಾನ್ಯವಾಗಿ ಈ ಆಪ್‌ಗಳಲ್ಲಿ ಡೆಲಿವರಿ ಶುಲ್ಕವನ್ನು ತಪ್ಪಿಸಲು ಅಥವಾ ಕನಿಷ್ಠ ಆರ್ಡರ್ ಮೊತ್ತವನ್ನು ತಲುಪಲು ಜನರು ಅನಿವಾರ್ಯವಾಗಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುತ್ತಾರೆ. 60 ರೂಪಾಯಿಯ ಹಾಲಿನ ಪ್ಯಾಕೆಟ್ ಖರೀದಿಸಲು ಹೋದವರು, 200 ರೂಪಾಯಿಯ ಮಿತಿ ದಾಟಿಸಲು ಅನಗತ್ಯವಾಗಿ ಚಾಕೊಲೇಟ್, ಚಿಪ್ಸ್ ಅಥವಾ ಇನ್ನಿತರ ತಿಂಡಿಗಳನ್ನು ಬುಕ್ ಮಾಡುತ್ತಾರೆ. ಇದರಿಂದ ಪ್ರತಿದಿನ ಸುಮಾರು 100 ರಿಂದ 150 ರೂಪಾಯಿ ಹೆಚ್ಚುವರಿ ಖರ್ಚಾಗುತ್ತದೆ. ಇಡೀ ತಿಂಗಳನ್ನು ಲೆಕ್ಕ ಹಾಕಿದರೆ ಸುಮಾರು 4,000 ದಿಂದ 5,500 ರೂಪಾಯಿಗಳಷ್ಟು ಹಣ ಉಳಿತಾಯವಾಗಿದೆ.
ಹಣ ಉಳಿತಾಯದ ಜೊತೆ ಆರೋಗ್ಯಕ್ಕೂ ಲಾಭ
ಹಣದ ಉಳಿತಾಯ ಮಾತ್ರವಲ್ಲದೆ, ದೈಹಿಕವಾಗಿಯೂ ಅವರಿಗೆ ಸಾಕಷ್ಟು ಲಾಭಗಳಾಗಿವೆ. ದಿನವಿಡೀ ಮೊಬೈಲ್‌ನಲ್ಲೇ ಆರ್ಡರ್ ಮಾಡುತ್ತಿದ್ದ ಅವರು, ಈ 30 ದಿನಗಳಲ್ಲಿ ತರಕಾರಿ ಮತ್ತು ದಿನಸಿ ತರಲು ಸ್ಥಳೀಯ ಅಂಗಡಿಗಳಿಗೆ ನಡೆದುಕೊಂಡೇ ಹೋಗಿದ್ದಾರೆ. ಇದು ಅವರ ದೇಹಕ್ಕೆ ಸಣ್ಣ ವ್ಯಾಯಾಮ ನೀಡಿದಂತಾಗಿದೆ. ಅಲ್ಲದೆ, ತಾವೇ ಖುದ್ದಾಗಿ ಹಣ್ಣು ಮತ್ತು ತರಕಾರಿಗಳನ್ನು ಆರಿಸುವುದರಿಂದ ತಾಜಾ ವಸ್ತುಗಳು ಲಭ್ಯವಾಗಿವೆ. ಮುಖ್ಯವಾಗಿ ತಡರಾತ್ರಿಯಲ್ಲಿ ಆಗುತ್ತಿದ್ದ ಅನಗತ್ಯ ತಿಂಡಿಗಳ ಕಡುಬಯಕೆ (Cravings) ಮತ್ತು ಅದರಿಂದ ಉಂಟಾಗುತ್ತಿದ್ದ ಆರೋಗ್ಯದ ತೊಂದರೆಗಳು ಕೂಡ ಕಡಿಮೆಯಾಗಿವೆ.
ಆನ್ಲೈನ್ ಆಪ್‌ಗಳು ನಮ್ಮ ಸಮಯವನ್ನು ಉಳಿಸುವುದು ನಿಜವಾದರೂ, ಅವು ನಮಗೆ ಅರಿವಿಲ್ಲದಂತೆ ನಮ್ಮ
ಹಣ ಮತ್ತು ಶಿಸ್ತನ್ನು ಕಸಿದುಕೊಳ್ಳುತ್ತವೆ. ಪದೇ ಪದೇ ಆರ್ಡರ್ ಮಾಡುವ ಅಭ್ಯಾಸದಿಂದ ನಾವು ತಿಂಗಳ ಪಟ್ಟಿ (List) ಮಾಡುವುದನ್ನು ಮರೆತಿದ್ದೇವೆ. ಆದರೆ ಈ 30 ದಿನಗಳ ಪ್ರಯೋಗವು ನಮಗೆ ಯೋಜಿತವಾಗಿ ಬದುಕುವುದನ್ನು ಕಲಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಣ್ಣ ಬದಲಾವಣೆಗಳು ಹೇಗೆ ನಮ್ಮ ಬದುಕು ಮತ್ತು ಹಣಕಾಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಅನುಭವವೇ ಸಾಕ್ಷಿ.
ಇದನ್ನೂ ಓದಿ: ಪದೇ ಪದೇ ಬಾಯಿ ಹುಣ್ಣು ಆಗುತ್ತಿದೆಯೇ? ; ಹಾಗಿದ್ದರೆ ಈ ವಿಟಮಿನ್ ಕೊರತೆ ಇರಬಹುದು ಎಚ್ಚರ!