ಅಗತ್ಯ ವಸ್ತುಗಳ ಬೆಲೆ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಟೇಲ್ ಮಾಲಿಕರ ಸಂಘದಿಂದ ಸೋಮವಾರ ಸಭೆ ಏರ್ಪಡಿಸಲಾಗಿತ್ತು. ಹೋಟೆಲ್ ತಿನಿಸುಗಳ ದರ ಹೆಚ್ಚಳ, 24 ತಾಸು ಹೋಟೆಲ್ ತೆರೆಯಲು ಅನುಮತಿಗೆ ಆಗ್ರಹ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೊಟೇಲ್ ಮಾಲಿಕರು ಚರ್ಚೆ ನಡೆಸಿದ್ದಾರೆ. . ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಎಫ್‍ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ಮುಂತಾದವರೊಡನೆ ಹೋಟೆಲ್ ಮಾಲಿಕರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡರು.
ಹೋಟೆಲ್ ಮಾಲಿಕರ ಸಂಘದಿಂದ ಸರ್ಕಾರಕ್ಕೆ ಸಲ್ಲಿಸಲು ಐದು ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಹೋಟೆಲ್ ವ್ಯವಹಾರಕ್ಕೂ ಉದ್ಯಮದ ಮಾನ್ಯತೆ , ಪ್ರತಿದಿನ 24 ತಾಸುಗಳ ಕಾಲ ಹೊಟೇಲ್ ತೆರೆಯಲು ಅನುಮತಿ, ಸಣ್ಣಪುಟ್ಟ ಹೊಟೇಲ್-ಬೇಕರಿಗಳ ಮೇಲೆ ದಾಳಿಯೆಸುಗುವ ಪುಡಿರೌಡಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ರಾಪಿಡ್ ಆಕ್ಷನ್ ಫೋರ್ಸ್ ಮುಂತಾದವುಗಳು ಹೊಟೇಲ್ ಮಾಲಿಕರ ಬಹುಮುಖ್ಯ ಬೇಡಿಕೆಯಾಗಿದೆ.
ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಈ ವೇಳೆ ಪ್ರತಿಕ್ರಿಯಸಿ, ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗಿದ್ದು ಅವರು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಜಿಎಸ್‍ಟಿ ಬಗ್ಗೆ ನಮ್ಮ ಆಕ್ಷೇಪಗಳನ್ನು ದಾಖಲಿಸಿದಾಗಲೂ ಸಹ ಸಕಾರಾತ್ಮಕವಾಗಿ ಸ್ಪಂದಿಸಲಾಗಿತ್ತು. ಗ್ಯಾಸ್ ಸಿಲಿಂಡರ್, ಹಾಲು, ಧಾನ್ಯಗಳು, ಖಾದ್ಯತೈಲ ಪ್ರತಿಯೊಂದರ ಬೆಲೆಯೂ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಟೇಲ್ ತಿನಿಸುಗಳ ಬೆಲೆಯೇರಿಕೆಯ ಬಗ್ಗೆಯೂ ಸಹ ಚರ್ಚೆ ನಡೆಸಲಾಗುತ್ತಿದೆ ಎಂದಿದ್ದಾರೆ.