ಬೆಂಗಳೂರು: ಗ್ರಾಹಕರ ಜೇಬಿಗೆ ಹೋಟೆಲ್ ಉಪಹಾರ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಿಂಡಿ-ತಿನಿಸಿನ ಬೆಲೆ ಹೆಚ್ಚಿಸಲು ಹೋಟೆಲ್ ಮತ್ತು ಉಪಹಾರ ಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಅಡುಗೆಗೆ ಬಳಕೆಯಾಗುವ ಖಾದ್ಯತೈಲ, ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲ ಸಿಲಂಡರ್ನ ಬೆಲೆ ಹೆಚ್ಚಾಗಿದೆ. ಇದರ ಜೊತೆಗೆ ಪೆಟ್ರೋಲ್-ಡೀಸೆಲ್ ಧಾರಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ಸರಿದೂಗಿಸಲು ಹೋಟೆಲ್ಗಳ ಮಾಲೀಕರು ಗಂಭೀರ ಚಿಂತನೆ ನಡೆಸಿದ್ದಾರೆ.
ಹೋಟೆಲ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಏಪ್ರಿಲ್ 4ರಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ಸಭೆ ಕರೆದಿದೆ. ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ.10ರಷ್ಟು ಹೆಚ್ಚಿಸಲು ಹೋಟೆಲ್ ಉದ್ಯಮಿಗಳು ಚಿಂತನೆ ನಡೆಸಿದ್ದಾರೆ.
ಆರ್ಥಿಕ ವರ್ಷದ ಮೊದಲ ದಿನ ಅಂದರೆ ಏಪ್ರಿಲ್ 1ರಂದು ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದೆ. ವಾಣಿಜ್ಯ ಎಲ್ಪಿಸಿ ಸಿಲಿಂಡರ್ ಬೆಲೆ ₹2,253ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಉಪಹಾರ, ಊಟ ದುಬಾರಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 2ನೇ ವಾರದಲ್ಲಿ ಮತ್ತೆ ದರ ಏರಿಕೆ ಮಾಡುವ ಚಿಂತನೆಯೂ ಕೇಂದ್ರ ಸರ್ಕಾರಕ್ಕೆ ಇದೆ ಎನ್ನಲಾಗಿದೆ. ದಿನಬಳಕೆ ವಸ್ತುಗಳ ದರದ ಮೇಲೆ ಪ್ರಭಾವ ಬೀರುವ ಅಡುಗೆ ಅನಿಲ, ಎಣ್ಣೆ, ಪೆಟ್ರೋಲ್, ಡೀಸೆಲ್, ನೀರಿನ ಬಿಲ್, ವಿದ್ಯುತ್ ಬಿಲ್, ಹಾಲಿನ ದರ ಏರಿಕೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿಯೂ ಟೀ, ಕಾಫಿ, ಉಪಹಾರ, ಊಟದ ಬೆಲೆ ಹೆಚ್ಚಿಸಲು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ.