ನವದೆಹಲಿ: ರಂಭಾಪುರಿ ಮಠದ ಸ್ವಾಮೀಜಿಗಳು ಗ್ಯಾರಂಟಿ ಯೋಜನೆಗಳಿಂದಾಗಿ ಜನ ಸೋಮಾರಿಗಳಾಗಿದ್ದಾರೆ ಎಂದು ಯಾವ ಹಿನ್ನೆಲೆ ಅಥವಾ ಸಂದರ್ಭದಲ್ಲಿ ಈ ರೀತಿ ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದರೆ ಸೋಮಾರಿಗಳಾಗುತ್ತಾರೆಯೇ? ಕರ್ನಾಟಕದಲ್ಲಿ 7 ಕೋಟಿ ಜನರಿದ್ದು ಅದರ ಅರ್ಧ ಭಾಗವಿರುವ 3.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿದರೆ ಹಣ ಉಳಿತಾಯವಾಗುತ್ತದೆ.
ಅವರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ಒದಗಿಸಿದರೆ ಅವರು ಮಕ್ಕಳನ್ನು ಓದಿಸುತ್ತಾರೆ. ಇದರಿಂದ ಮಹಿಳೆಯರು ಸಬಲರಾಗುತ್ತಾರೆಯೇ ವಿನಃ ಸೋಮಾರಿ ಆಗಲು ಹೇಗೆ ಸಾಧ್ಯ ಎಂದು ರಂಭಾಪುರಿ ಶ್ರೀಗಳ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
‘ಅಸಮಾನತೆ ಹೋಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗಲ್ಲ’
ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದಿದ್ದರು. ಅವರು ಮೇಧಾವಿಗಳಾಗಿದ್ದು, ಅವರು ಹೇಳಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಜಾತಿ ಹೋಗಬೇಕಾದರೆ ಆರ್ಥಿಕವಾಗಿ ಸಬಲರಾಗಲು, ಸಮಾನತೆ ತರಲು ಸಾಮಾಜಿಕ – ಆರ್ಥಿಕ ಶಕ್ತಿ ದೊರಕಬೇಕು. ದೇಶ ಕಂಡ ಮೇಧಾವಿಗಳಲ್ಲೇ ಅಪ್ರತಿಮ ಮೇಧಾವಿಗಳಾದ ಅಂಬೇಡ್ಕರ್ ಅವರು ದೇಶದಲ್ಲಿನ ಅಸಮಾನತೆ ಹೋಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ.
ಸಮಸಮಾಜದ ನಿರ್ಮಾಣಕ್ಕೆ ಜಾತೀಯತೆ, ವರ್ಗ ವ್ಯವಸ್ಥೆ ಹೋಗಬೇಕು ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಬಹುದು ಎಂದು ಸಾಕಷ್ಟು ಚರ್ಚೆ ಮಾಡಿ ನಂತರ ನಿರ್ಣಯ ಮಾಡಿದ್ದೇವೆ ಎಂದಿದ್ದಾರೆ.