ತೀರ್ಥಹಳ್ಳಿ: ಸದನದಲ್ಲಿ ಸಚಿವ ಮಾಧುಸ್ವಾಮಿ ತುಳು ಭಾಷೆಯ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದ ಕೆಲವು ದಿನಗಳಲ್ಲಿ ರಾಜ್ಯದ ಮತ್ತೊಬ್ಬ ಸಚಿವರು ತುಳುನಾಡಿನ ಜನರ ಮನಸ್ಸಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತೀರ್ಥಹಳ್ಳಿಯಲ್ಲಿ ರೈತ ಸಮಾವೇಶದಲ್ಲಿ ಪಾಲ್ಗೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ತುಳುನಾಡಿನ ದೈವ ಗುಳಿಗವನ್ನು ಅವಮಾನಿಸಿದ್ದಾರೆ.
ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮುಖಂಡರು ಆಯೋಜಿಸಿರುವ ಶಿವಧೂತೆ ಗುಳಿಗೆ ನಾಟಕದ ಬಗ್ಗೆ ಗೃಹ ಸಚಿವರು ಆಕ್ಷೇಪ ಎತ್ತಿ, ಗುಳಿಗ ದೈವದ ಬಗ್ಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಸದ್ಯ ಸಚಿವರು ಆಡಿದ ಮಾತುಗಳಿಗೆ ತುಳುನಾಡಿನ ದೈವಗಳ ಭಕ್ತರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ʼಗುಳಿಗೆ, ಗುಳಿಗೆ ಎಂದು ಹೇಳಿ ಜನರಿಗೆ ಜಾಪಾಳ ಮಾತ್ರೆ ಕೊಡುವ ಅಪಾಯವಿದೆ. ಹೊಸ ಹೊಸ ನಾಟಕ ಆರಂಭವಾಗಿದೆʼ ಎಂದು ಗೃಹ ಸಚಿವರು ಹೇಳುತ್ತಿರುವ ವಿಡಿಯೋ ತುಣುಕು ವೈರಲ್ ಆಗಿದ್ದು, ಇದನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿರುವ ಕಿಮ್ಮನೆ ರತ್ನಾಕರ್, “ಮಾರ್ಚ್ 14 ರಂದು ಆಯೋಜಿಸಿದ್ದ ಜನ ಮೆಚ್ಚಿರುವಂತ “ಶಿವದೂತೆ ಗುಳಿಗೆ” ನಾಟಕ ಕುರಿತು ಆರಗ ಜ್ಞಾನೇಂದ್ರ ನವರು ಅವಮಾನಿಸಿರುವುದು ಅತ್ಯಂತ ದುಃಖಕರ ಸಂಗತಿ. ದೈವವನ್ನು ಕುರಿತು ಇಷ್ಟು ಹಗುರವಾಗಿ ಅಪಹಾಸ್ಯ ಮಾಡಿರುವುದು ಖಂಡನೀಯ.” ಎಂದು ಬರೆದಿದ್ದಾರೆ.