ಸುಮಾರು ಏಳು ದಶಕಗಳ ಹಿಂದೆ ಆತ್ಮನಿರ್ಭರ ಭಾರತದ ಕನಸಿನೊಂದಿಗೆ ಆರಂಭವಾದ ಸರ್ಕಾರಿ (Central Govt) ಸ್ವಾಮ್ಯದ ವಾಚ್ ತಯಾರಿಕಾ ಸಂಸ್ಥೆ ಹಿಂದುಸ್ತಾನ್ ಮಷಿನ್ ಟೂಲ್ ಲಿಮಿಟೆಡ್ (HMT) ಈಗ ಸಂಪೂರ್ಣ ಮುಚ್ಚುವ ಹಂತಕ್ಕೆ ಬಂದಿದೆ.
ತನ್ನ ವಾಚ್ ತಯಾರಿಕಾ ಘಟಕದ ಹೆಸರನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕುವಂತೆ ಕೇಂದ್ರ ಕಂಪನಿಗಳ ವ್ಯವಹಾರಗಳ ಸಚಿವಾಲಯಕ್ಕೆ ಎಚ್‌ಎಂಟಿ ಪತ್ರ ಬರೆದಿದೆ. ಇದರೊಂದಿಗೆ ಕಂಪನಿಯನ್ನು ಪುನರುಜ್ಜೀವನಗೊಳಿಸುವ ಎಲ್ಲಾ ನಿರೀಕ್ಷೆಗಳು ಕೊನೆಗೊಂಡಿವೆ.
ದೇಶದ ಕೈಗಾರಿಕಾ ಇತಿಹಾಸದ ಒಂದು ಮಹತ್ವದ ಅಧ್ಯಾಯ ಮುಕ್ತಾಯದ ಹಂತಕ್ಕೆ ಬಂದಿದೆ. ಇದಕ್ಕೂ ಮೊದಲು, 2016ರ ಜನವರಿ 6ರಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಎಚ್‌ಎಂಟಿಯ ಮೂರು ಅಂಗಸಂಸ್ಥೆಗಳನ್ನು ಮುಚ್ಚಲು ಅನುಮತಿ ನೀಡಿತ್ತು.
ಅಗತ್ಯವಿರುವ ಎಲ್ಲ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ಎಚ್‌ಎಂಟಿ ಇದೀಗ ವಾಚ್ ತಯಾರಿಕೆಗೆ ಅಂತಿಮವಾಗಿ ವಿದಾಯ ಹೇಳಿದೆ. ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರಗಳ ನಡುವೆಯೂ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆ ಇತ್ತು. ಆದರೆ ಆ ಆಶೆಯೂ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.
ಸಂಸ್ಥೆಯ ಇತಿಹಾಸ
1961ರಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಲಿಮಿಟೆಡ್ ಮತ್ತು ಜಪಾನ್‌ನ ಸಿಟಿಜನ್ ವಾಚ್ ಕಂಪನಿ ಸೇರಿ ‘ಎಚ್‌ಎಂಟಿ ವಾಚ್’ ಉತ್ಪಾದನೆ ಆರಂಭಿಸಿತು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿ ಹೊಂದಿದ್ದ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಿಕಾ ಕಂಪನಿಯಾಗಿ ಹೆಸರು ಮಾಡಿತು.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದ್ದ ಎಚ್‌ಎಂಟಿ ವಾಚ್‌ಗಳು ಭಾರತೀಯರ ಮನೆಮಾತಾಗಿದ್ದವು. ಸರಳ ವಿನ್ಯಾಸ ಇದ್ದರೂ, ಬಾಳಿಕೆಗೆ ಅವು ಪ್ರಸಿದ್ಧವಾಗಿದ್ದವು. ಜನತಾ, ಪೈಲಟ್ ಮತ್ತು ಕೊಹಿನೂರ್ ಎಚ್‌ಎಂಟಿಯ ಜನಪ್ರಿಯ ಬ್ರಾಂಡ್‌ಗಳಾಗಿದ್ದವು. ಇದುವರೆಗೆ 10 ಕೋಟಿಗೂ ಹೆಚ್ಚು ವಾಚ್‌ಗಳು ಮಾರಾಟವಾಗಿವೆ ಎಂಬ ಅಂದಾಜಿದೆ.
ಅವನತಿ
ವರ್ಷಗಳೊಂದಿಗೆ ಅನೇಕ ಖಾಸಗಿ ವಾಚ್ ಕಂಪನಿಗಳು ಮಾರುಕಟ್ಟೆಗೆ ಪ್ರವೇಶಿಸಿದ ಕಾರಣ, 2000ರ ನಂತರ ಎಚ್‌ಎಂಟಿಯ ಪತನ ಆರಂಭವಾಯಿತು. ಇದೀಗ ದೇಶದ ಕೈಗಾರಿಕಾ ಇತಿಹಾಸದಲ್ಲಿ ತನ್ನದೇ ಆದ ಗುರುತು ಬಿಟ್ಟಿರುವ ಈ ಸಂಸ್ಥೆ, ಶಾಶ್ವತವಾಗಿ ತನ್ನ ‘ಟಿಕ್–ಟಿಕ್’ ಧ್ವನಿಯನ್ನು ನಿಲ್ಲಿಸುತ್ತಿದೆ.