ಬೆಂಗಳೂರು: ಸುಪ್ರಸಿದ್ಧ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ ದೊರೆತಿದೆ. ಮಾರ್ಚ್ 29ರ ರಾತ್ರಿ 10 ಗಂಟೆಗೆ ಅದ್ದೂರಿ ರಥೋತ್ಸವ ಮತ್ತು ಮುಂಜಾನೆ 3 ಗಂಟೆಗೆ ಧ್ವಜರೋಹಣ ಮೂಲಕ ಕರಗಕ್ಕೆ ವಿದ್ಯುಕ್ತ ಚಾಲನೆ ನೀಡಲಾಯ್ತು
ಏಪ್ರಿಲ್ 6ರವರೆಗೆ ಕರಗ ಮಹೋತ್ಸವ ನಡೆಯಲಿದ್ದು, 11 ದಿನ ಕಾಲ ವಿವಿಧ ಅದ್ಧೂರಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕಳೆದ ಬಾರಿ ಕರಗ ಹೊತ್ತ ಪೂಜಾರಿ ಜ್ಞಾನೇಂದ್ರ ಅವರೇ ಈ ಬಾರಿಯೂ ಕರಗ ಹೊರಲಿದ್ದಾರೆ.
ಏಪ್ರಿಲ್ 6 ರಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಏಪ್ರಿಲ್ 6 ರಂದು ರಾತ್ರಿ 12.30ಕ್ಕೆ ದ್ರೌಪದಿ ಮೆರವಣಿಗೆ ಹೊರಡಲಿದೆ. ಸಂಪ್ರದಾಯದಂತೆ ಕಾಟನ್ ಪೇಟೆಯ ಮಸ್ತಾನ್ ಸಾಬ್ ಗುಡಿ ಎಂದೇ ಪ್ರಸಿದ್ಧವಾಗಿರುವ ದರ್ಗಾಕ್ಕೆ ಭೇಟಿ ನೀಡಿ ನಂತರ ತಿಗಳರ ಪೇಟೆ, ಕುಂಬಾರಪೇಟೆ, ಬಳೇಪೇಟೆ, ನಗರ್ತಪೇಟೆ, ಸೇರಿದಂತೆ ಪೇಟೆ ಬೀದಿಗಳಲ್ಲಿ ಕರಗ ಮೆರವಣಿಗೆ ಸಂಚರಿಸಲಿದೆ. ಏಪ್ರಿಲ್ 7 ಮುಂಜಾವಿನಲ್ಲಿ ಧರ್ಮರಾಯಸ್ವಾಮಿ ದೇವಾಲಯ ತಲುಪುವ ಕರಗ ಮೆರವಣಿಗೆ ಅಂತ್ಯಗೊಳಿಸಲಿದೆ. ಏಪ್ರಿಲ್ 8ರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜರೋಹಣ ಮೂಲಕ 2023 ರ ಐತಿಹಾಸಿಕ ಕರಗಕ್ಕೆ ಮಹೋತ್ಸವಕ್‌ಕೆ ತೆರೆ ಬೀಳಲಿದೆ.