ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಟಿಪ್ಪು ಸುಲ್ತಾನ್ ಹೆಸರು ಮತ್ತೆ ಚಲಾವಣೆಗೆ ಬಂದಿದೆ. ಬಿಜೆಪಿ ನಾಯಕರು ಟಿಪ್ಪುವನ್ನು ಬಳಸಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದು, ದೇಶ ವಿರೋಧಿ, ಹಿಂದೂ ಹಾಗೂ ಕನ್ನಡ ವಿರೋಧಿಯಾಗಿದ್ದ ಟಿಪ್ಪುವನ್ನು ಕಾಂಗ್ರೆಸ್ ಓಲೈಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇತಿಹಾಸ ತೆರೆದು ನೋಡಿದರೆ ಉರಿಗೌಡ, ದೊಡ್ಡ ನಂಜೇಗೌಡ ಹೆಸರಿದೆ. ಅವರು ಮೈಸೂರು ಮಹಾರಾಜರ ಅನುಯಾಯಿಗಳಾಗಿ ಕೆಲಸ ಮಾಡಿದ್ದಾರೆ. ಟಿಪ್ಪುವನ್ನು ಕೊಲ್ಲುವ ಮೂಲಕ ಇಬ್ಬರೂ ಇತಿಹಾಸ ಪುಟ ಸೇರಿದ್ದಾರೆ. ರಸ್ತೆ ಹಾಗೂ ಕಟ್ಟಡಗಳಿಗೆ ಗುಲಾಮಿತನದ ಹೆಸರಿಡಲಾಗಿದೆ, ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ ಬರೆಯಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
ನಂದಿ ಬೆಟ್ಟಕ್ಕೆ ಹೋದ್ರೆ ಟಿಪ್ಪು ಡ್ರಾಪ್ ಇದೆ. ಅಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿತ್ತು, ಅದಕ್ಕೆ ಅಲ್ಲಿಗೆ ಟಿಪ್ಪು ಡ್ರಾಪ್ ಹೆಸರು ಬಂದಿದೆ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.
ನಂಜೇಗೌಡ-ಉರಿಗೌಡನ ಬಗ್ಗೆ ಜೆಡಿಎಸ್ ನಾಯಕರಿಗೆ ಹೆಮ್ಮೆ ಏಕಿಲ್ಲ ಎಂದು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಉರಿಗೌಡ-ನಂಜೇಗೌಡ ಸಿನೆಮಾ ಶೀರ್ಷಿಕೆಯ ರಿಜಿಸ್ಟರ್ ಬಗ್ಗೆ ಆಕ್ಷೇಪ ಎತ್ತಿದ ಹೆಚ್‌ಡಿಕೆಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
“ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಉರಿಗೌಡ ಹಾಗೂ ನಂಜೇಗೌಡ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಅನುಮಾನವಿದೆ. ಈ ಬಗ್ಗೆ ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಿ, ಟಿಪ್ಪುವನ್ನು ಉರಿಗೌಡ-ನಂಜೇಗೌಡರು ಕೊಂದಿರುವುದರ ಬಗ್ಗೆ ಬಿಜೆಪಿಗೆ ಯಾವುದೇ ಅನುಮಾನವಿಲ್ಲʼ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.