ಶತಮಾನಗಳ ಇತಿಹಾಸವಿರುವ ಬೇಲೂರಿನ ಶ್ರೀ ಚನ್ನಕೇಶವ ದೇವರ ರಥೋತ್ಸವಕ್ಕೂ ಮುನ್ನ ನಡೆಯುವ ಕುರಾನ್ ಪಾರಾಯಣವನ್ನು ನಿಲ್ಲಿಸಬೇಕು ಎಂದು ಹಿಂದೂ ಪರ ಸಂಘಟನೆಗಳು ಬೇಲೂರಿನಲ್ಲಿ ಪ್ರತಿಭಟನೆ ಆರಂಭಿಸಿದ್ದು, ಏಪ್ರಿಲ್ 3ರೊಳಗೆ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ಬಂದ ಬೈಕ್ ನಲ್ಲಿ ಮುಸ್ಲಿಂ ಯುವಕನೊಬ್ಬ ‘ಕುರಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಇದರಿಂದ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಯುವಕನನ್ನು ಅಟ್ಟಾಡಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಘೋಷಣೆ ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಮುಂದುವೆಸಿದ್ದಾರೆ.
ಶ್ರೀ ಚನ್ನಕೇಶವ ದೇವರ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯ ಹಲವು ದಶಕಗಳಿಂದ ಚಾಲ್ತಿಯಲ್ಲಿದ್ದು, ಇದನ್ನು ನಿಲ್ಲಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ.