Thursday, July 16, 2026
Homeಟಾಪ್ ನ್ಯೂಸ್AMERICA : ಅಮೆರಿಕದಲ್ಲಿ ‘ಹಿಂದೂ ಅಡ್ವೊಕೇಸಿ ಡೇ’- ಒಂದಾದ 15 ರಾಜ್ಯಗಳ ಪ್ರತಿನಿಧಿಗಳು!

AMERICA : ಅಮೆರಿಕದಲ್ಲಿ ‘ಹಿಂದೂ ಅಡ್ವೊಕೇಸಿ ಡೇ’- ಒಂದಾದ 15 ರಾಜ್ಯಗಳ ಪ್ರತಿನಿಧಿಗಳು!

ವಾಷಿಂಗ್ಟನ್ : ಅಮೆರಿಕದ (America) 15 ರಾಜ್ಯಗಳ 130ಕ್ಕೂ ಹೆಚ್ಚು ಹಿಂದೂ ಅಮೆರಿಕನ್ನರು ಈ ವಾರ ವಾಷಿಂಗ್ಟನ್‌ನ ಕ್ಯಾಪಿಟಲ್ ಹಿಲ್‌ನಲ್ಲಿ ಜಮಾಯಿಸುವ ಮೂಲಕ ಐದನೇ ವಾರ್ಷಿಕ ‘ಹಿಂದೂ ಅಡ್ವೊಕೇಸಿ ಡೇ’ (ಹಿಂದೂ ಹಿತರಕ್ಷಣಾ ದಿನ) (Hindu Community) ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. 

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷದ ಸಂಭ್ರಮಾಚರಣೆಯ ನಡುವೆಯೇ ನಡೆದ ಈ ಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ, ನಾಗರಿಕ ಭಾಗಿತ್ವ ಮತ್ತು ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಹೆಚ್ಚಾಗುತ್ತಿರುವ ಹಿಂದೂ ವಿರೋಧಿ ದ್ವೇಷ ಹಾಗೂ ‘ಹಿಂದೂಫೋಬಿಯಾ’ (ಹಿಂದೂ ಧರ್ಮದ ಬಗೆಗಿನ ಅನಗತ್ಯ ಭಯ-ದ್ವೇಷ) ಕುರಿತು ಗಂಭೀರ ಚರ್ಚೆಗಳನ್ನು ನಡೆಸಲಾಯಿತು.

ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (CoHNA) ಆಯೋಜಿಸಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಅಮೆರಿಕದ ಜನಪ್ರತಿನಿಧಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಂಶೋಧಕರು ಮತ್ತು ವಿವಿಧ ಧರ್ಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಿಪಬ್ಲಿಕನ್ ಮತ್ತು ಡೆಮೋಕ್ರಾಟಿಕ್ ಎರಡೂ ಪಕ್ಷಗಳ ಒಟ್ಟು 7 ಮಂದಿ ಕಾಂಗ್ರೆಸ್ ಸದಸ್ಯರು (ಸಂಸದರು) ಮತ್ತು 12 ಸಂಸದೀಯ ಸಿಬ್ಬಂದಿ ಈ ಸಂವಾದದಲ್ಲಿ ಪಾಲ್ಗೊಂಡಿದ್ದರು. 

ಈ ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಪ್ರತಿನಿಧಿಗಳು ಅಮೆರಿಕದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸಿಬ್ಬಂದಿಯೊಂದಿಗೆ 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಲ್ಲದೆ, 120ಕ್ಕೂ ಹೆಚ್ಚು ಸಂಸದೀಯ ಕಚೇರಿಗಳಿಗೆ ಭೇಟಿ ನೀಡಿ ಹಿಂದೂ ಅಮೆರಿಕನ್ನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.

ಕೋಹ್ನಾ (CoHNA) ಅಧ್ಯಕ್ಷ ನಿಕುಂಜ್ ತ್ರಿವೇದಿ ಮಾತನಾಡಿ, ಈ ಸಭೆಯು ಹಿಂದೂ ಅಮೆರಿಕನ್ ಸಮುದಾಯದ ವೈವಿಧ್ಯತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ. ಅಮೆರಿಕನ್ನರಾಗಿ ನಾವೆಲ್ಲರೂ ಒಂದಾಗಿ ನಮ್ಮ ಕಥೆಗಳನ್ನು ಹಂಚಿಕೊಂಡಿದ್ದೇವೆ ಮತ್ತು ಅಮೆರಿಕದ ರಾಷ್ಟ್ರಗೀತೆಯನ್ನು ಹಾಡಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. 

ವಿದ್ಯಾರ್ಥಿಗಳು, ಉದ್ಯಮಿಗಳು, ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಸೈನಿಕರಾಗಿ ಅಮೆರಿಕದ ಬೆಳವಣಿಗೆಗೆ ಹಿಂದೂಗಳು ನೀಡುತ್ತಿರುವ ಕೊಡುಗೆ ದೊಡ್ಡದಾಗಿದ್ದು, ಅಮೆರಿಕದ 250ನೇ ಸಂಸ್ಥಾಪನಾ ದಿನದ ಈ ಸಂದರ್ಭವು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಚರಿಸಲು ಸಿಕ್ಕ ದೊಡ್ಡ ಅವಕಾಶವಾಗಿದೆ ಎಂದು ತ್ರಿವೇದಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಮೇನಿಯನ್ ಮತ್ತು ಯಹೂದಿ (Jewish) ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಹಿಂದೂ ಸಮುದಾಯಕ್ಕೆ ತಮ್ಮ ಬೆಂಬಲ ಸೂಚಿಸಿದರು.

ರಗರ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟ ಮತ್ತು ಭಗವದ್ಗೀತೆ ಪ್ರೇರಣೆ

ಯುವ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ರಗರ್ಸ್ ವಿಶ್ವವಿದ್ಯಾಲಯದ (Rutgers University) ವಿದ್ಯಾರ್ಥಿಗಳು, ಕ್ಯಾಂಪಸ್‌ಗಳಲ್ಲಿ ಹಿಂದೂಗಳ ವಿರುದ್ಧ ನಡೆಯುವ ದ್ವೇಷದ ಘಟನೆಗಳನ್ನು ತಾವು ಹೇಗೆ ಎದುರಿಸಿದೆವು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಅಂತಿಮವಾಗಿ ಹಿಂದೂ ಧರ್ಮದ ಕುರಿತು ಶೈಕ್ಷಣಿಕ ಸಮ್ಮೇಳನವನ್ನು ಹೇಗೆ ಆಯೋಜಿಸಿದೆವು ಎಂಬ ಯಶೋಗಾಥೆಯನ್ನು ಹಂಚಿಕೊಂಡರು. 

ಅಮೆರಿಕದ ಸೇನೆಯಲ್ಲಿ ಸೇವೆ ಸಲ್ಲಿಸಿ ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಭಾರತೀಯ ಮೂಲದ ಮಾಜಿ ಸೈನಿಕ ರುಚಿರ್ ಬಕ್ಷಿ ಅವರು ಮಾತನಾಡಿ, ಯುದ್ಧ ಭೂಮಿಯಲ್ಲಿದ್ದಾಗ ತಮಗೆ ಭಗವದ್ಗೀತೆಯ ಬೋಧನೆಗಳು ಹೇಗೆ ಪ್ರೇರಣೆ ನೀಡಿದವು ಎಂಬುದನ್ನು ವಿವರಿಸಿದರು. ಗೀತೆಯಲ್ಲಿ ಹೇಳಲಾದ ಶಿಸ್ತು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯು ತಮ್ಮ ಸೈನಿಕ ಜೀವನ ಹಾಗೂ ನಾಗರಿಕ ಜವಾಬ್ದಾರಿಯನ್ನು ನಿಭಾಯಿಸಲು ದಾರಿದೀಪವಾಯಿತು ಎಂದು ಅವರು ಹೆಮ್ಮೆಯಿಂದ ಸ್ಮರಿಸಿದರು.

ಹಿಂದೂ ದೇವಾಲಯಗಳ ಮೇಲಿನ ದಾಳಿಗೆ ಅಮೆರಿಕ ಸಂಸದರ ಖಂಡನೆ:

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಭಯ ಪಕ್ಷಗಳ ಅಮೆರಿಕದ ಸಂಸದರು ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ಧ್ವಂಸ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದರು. ಜಾರ್ಜಿಯಾದ ರಿಪಬ್ಲಿಕನ್ ಸಂಸದ ಬಡ್ಡಿ ಕಾರ್ಟರ್ ಮಾತನಾಡಿ, ಧಾರ್ಮಿಕ ಸ್ವಾತಂತ್ರ್ಯವು ಅಮೆರಿಕದ ಮೂಲಭೂತ ಹಕ್ಕಾಗಿದ್ದು, ದೇವಾಲಯಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದರು. ಮಿಚಿಗನ್‌ನ ಡೆಮೋಕ್ರಾಟಿಕ್ ಸಂಸದ ಶ್ರೀ ಥಾಣೆದಾರ್ ಅವರು ವಿಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಹಿಂದೂ ವಲಸಿಗರ ಕೊಡುಗೆಯನ್ನು ಶ್ಲಾಘಿಸಿದರು. 

ವರ್ಜೀನಿಯಾದ ಸಂಸದ ಸುಹಾಸ್ ಸುಬ್ರಮಣ್ಯಂ ಅವರು ಮಾತನಾಡಿ, ಹಿಂದೂ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಯಾವುದೇ ತಾರತಮ್ಯ ಎದುರಾದಾಗ ಮೌನವಾಗಿರದೆ, ಧೈರ್ಯದಿಂದ ತಮ್ಮ ಧಾರ್ಮಿಕ ಗುರುತನ್ನು ಹೆಮ್ಮೆಯಿಂದ ಪ್ರದರ್ಶಿಸಬೇಕು ಎಂದು ಕರೆ ನೀಡಿದರು. ಕ್ಯಾಲಿಫೋರ್ನಿಯಾದ ಸಂಸದೆ ಜೋ ಲೋಫ್ಗ್ರೆನ್ ಅವರು ಜಾತಿ ಸಂಬಂಧಿತ ಶಾಸನಗಳನ್ನು ತರುವಾಗ ಯಾರ ಮೇಲೂ ತಾರತಮ್ಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. 

ಜಾರ್ಜಿಯಾದ ಸಂಸದರಾದ ಸ್ಯಾನ್‌ಫೋರ್ಡ್ ಬಿಷಪ್, ಬ್ರಿಯಾನ್ ಜಾಕ್ ಮತ್ತು ರಿಚ್ ಮೆಕಾರ್ಮಿಕ್ ಅವರು ಮಾತನಾಡಿ, ಹಿಂದೂಫೋಬಿಯಾವು ಅಮೆರಿಕದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಹಿಂದೂಗಳ ಶಿಕ್ಷಣ, ಉದ್ಯಮಶೀಲತೆ ಮತ್ತು ಕೌಟುಂಬಿಕ ಮೌಲ್ಯಗಳು ಅಮೆರಿಕನ್ ಡ್ರೀಮ್ ಅನ್ನು ಪ್ರತಿಬಿಂಬಿಸುತ್ತವೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಇದನ್ನೂ ಓದಿ : ಆಕಾಶದಲ್ಲೇ ಅಮೆರಿಕದ ನಕ್ಷೆ ಎಂದು ಬರೆದ ಪೈಲಟ್ – ವಿಡಿಯೋ ವೈರಲ್!- VIDEO

ಸಂಶೋಧನಾ ವರದಿಗಳ ಮಂಡನೆ

ಕಾರ್ಯಕ್ರಮದಲ್ಲಿ ನೆಟ್‌ವರ್ಕ್ ಕಂಟೇಜಿಯನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (NCRI) ಸಹ-ನಿರ್ದೇಶಕ ಡಾ. ಜೋಯಲ್ ಫಿಂಕೆಲ್‌ಸ್ಟೈನ್ ಮತ್ತು ಸಂಶೋಧಕಿ ಪ್ರಸಿದ್ಧಾ ಸುಧಾಕರ್ ಅವರು ತಮ್ಮ ಸಂಶೋಧನಾ ವರದಿಗಳನ್ನು ಮಂಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಜಾಗತಿಕ ರಾಜಕೀಯದ ಪ್ರಭಾವದಿಂದಾಗಿ ಹಿಂದೂ ಹಬ್ಬಗಳು, ಆಚರಣೆಗಳು ಹಾಗೂ ದೇವಾಲಯಗಳ ವಿರುದ್ಧ ಹೇಗೆ ವ್ಯವಸ್ಥಿತ ಅಪಪ್ರಚಾರ ಮತ್ತು ದ್ವೇಷವನ್ನು ಹರಡಲಾಗುತ್ತಿದೆ ಎಂಬುದನ್ನು ದತ್ತಾಂಶಗಳ ಸಮೇತ ಅವರು ವಿವರಿಸಿದರು. 

ರಾಜಕೀಯ ತಂತ್ರಜ್ಞ ಅನಂಗ್ ಮಿತ್ತಲ್ ಅವರು ‘ಸೈಟೇಶನ್ ಇಂಟೆಗ್ರಿಟಿ ಡ್ಯಾಶ್‌ಬೋರ್ಡ್’ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ, ಹಿಂದೂಗಳ ವಿರುದ್ಧದ ವರದಿಗಳ ಸತ್ಯಾಸತ್ಯತೆಯನ್ನು ಹೇಗೆ ಪತ್ತೆಹಚ್ಚಬಹುದು ಎಂದು ತಿಳಿಸಿಕೊಟ್ಟರು. ಕೊನೆಯಲ್ಲಿ ಮಾತನಾಡಿದ ಕೋಹ್ನಾ (CoHNA) ಸರ್ಕಾರದ ವ್ಯವಹಾರಗಳ ನಿರ್ದೇಶಕಿ ಸುಧಾ ಜಗನ್ನಾಥನ್, ಅಮೆರಿಕದ ಸಂಸದರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಗಾಗಿ ಇಂತಹ ನಾಗರಿಕ ಜಾಗೃತಿ ನಿರಂತರವಾಗಿರಬೇಕು ಎಂದು ಆಶಿಸಿದರು.

ಹೆಚ್ಚಿನ ಸುದ್ದಿ

Change Language »
error: Content is protected !!