Thursday, March 20, 2025
Homeರಾಜ್ಯನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ

ನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ

ಶುಕ್ರವಾರ ಕರೆ ನೀಡಲಾಗಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಹೈಕೋರ್ಟ್ ಸಾರಿಗೆ ನೌಕರರ ಕಿವಿ ಹಿಂಡಿದೆ. ಸಾರಿಗೆ ನೌಕರರ ಮುಷ್ಕರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸಿ.ಜೆ ಪ್ರಸನ್ನ, ಬಿ. ವರಾಳೆ ಪೀಠ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ
ಮಾ. 24 ರ ಸಾರಿಗೆ ನೌಕರರ ಮುಷ್ಕರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಖಚಿತಪಡಿಸಿದ್ದರು. ಆದರೆ ಈಗ ಅನಿವಾರ್ಯವಾಗಿ ಕೋರ್ಟ್ ಆದೇಶವನ್ನು ಪಾಲಿಸಬೇಕಿದೆ. ಈ ಹಿಂದೆ ಮಾ. 14 ರಂದು ಮುಷ್ಕರಕ್ಕೆ ಕರೆ ನೀಡಿದ್ದರು. ಬಳಿಕ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ನೌಕರರೊಂದಿಗೆ ಸಂಧಾನ ನಡೆಸಿದ್ದರು. ಈ ವೇಳೆ ವೇತನ ಹೆಚ್ಚಳವನ್ನು ಶೇ 16 ಕ್ಕೆ ಹೆಚ್ಚಿಸಲಾಗಿತ್ತು.
ಸಾರಿಗೆ ನೌಕರರಲ್ಲಿ ಎರಡು ಬಣಗಳಾಗಿದ್ದು, ಅನಂತ ಸುಬ್ಬರಾವ್ ಬಣ ಮುಷ್ಕರವನ್ನು ಹಿಂಪಡೆದಿತ್ತು. ಆರ್. ಚಂದ್ರಶೇಖರ್ ಬಣ ಮುಷ್ಕರವನ್ನು ಮುಂದೂಡಿತ್ತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ವೇತನ ಹೆಚ್ಚಳ ನಮಗೆ ತೃಪ್ತಿ ತಂದಿಲ್ಲ ಎಂದು ದೂರಿದ್ದ ಸಾರಿಗೆ ನೌಕರರು ಶೇ 25 ರಷ್ಟು ವೇತನ ಹೆಚ್ಚಳ ಅಥವಾ ಸರ್ಕಾರಿ ನೌಕರರ ವೇತನ ಶ್ರೇಣಿಗಾಗಿ ಪಟ್ಟು ಹಿಡಿದಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಶೇಖರ್, ಸಂಧಾನಕ್ಕೆಂದು ಆಹ್ವಾನಿಸಿ ಬೆದರಿಕೆ ಹಾಕಿದ್ದಾರೆ. ಚಾಲಕರು ಹಾಗೂ ನಿರ್ವಾಹಕರಿಗೆ ನ್ಯಾಯ ಒದಗಿಸಲು ಹಳೆಯ ಸಂಘಟನೆಗಳ ನಾಯಕರೇ ಅಡ್ಡಿಯಾಗಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!