ಪಂಜಾಬ್ ಪ್ರತ್ಯೇಕತಾವಾದಿ ಸಂಘಟನೆಯ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಹರ್ಯಾಣ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ಎತ್ತಿಕೊಂಡಿದೆ. ಅಮೃತ್ ಪಾಲ್ ನನ್ನು ಬಂಧಿಸಲು ಸಾಧ್ಯವಾಗದ ಪೊಲೀಸ್ ಇಲಾಖೆ ದಕ್ಷತೆಯ ಬಗ್ಗೆ ಹೈಕೋರ್ಟ್ ಪ್ರಶ್ನೆಗಳನ್ನು ಎತ್ತಿದೆ.
ಪಂಜಾಬ್ ಪೊಲೀಸರ ಗುಪ್ತಚರ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆಯೇ? ಪೊಲೀಸ್ ಇಲಾಖೆಯಲ್ಲಿ 80 ಸಾವಿರ ಸಿಬ್ಬಂದಿಗಳೂ ಇದ್ದರೂ ಅಮೃತ್ ಪಾಲ್ ನನ್ನು ಬಂಧಿಸಲು ಇನ್ನೂ ಏಕೆ ಸಾಧ್ಯವಾಗಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಅಮೃತಪಾಲ್ ಸಿಂಗ್ ನನ್ನು ಹಿಡಿಯಲು ಸಂಪೂರ್ಣ ಯೋಜನೆ ಮಾಡಲಾಗಿದೆ ಆದರೆ ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪಂಜಾಬ್‌ನ ಅಟಾರ್ನಿ ಜನರಲ್ ವಿನೋದ್ ಘಾಯ್ ಅವರು ಹೇಳಿದ್ದಾರೆ. ಪೊಲೀಸರ ಬಳಿ ಶಸ್ತ್ರಾಸ್ತ್ರಗಳಿವೆ, ಆದರೆ ಪೊಲೀಸರು ಬಲಪ್ರಯೋಗ ಮಾಡುತ್ತಿಲ್ಲ, ಕೆಲವು ವಿಷಯಗಳು ಸೂಕ್ಷ್ಮವಾಗಿರುತ್ತವೆ ಎಂಬ ಕಾರಣದಿಂದ ಪೊಲೀಸರು ಬಲಪ್ರಯೋಗವನ್ನು ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಪ್ರತ್ಯೇಕತಾವಾದಿ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತ್ ಪಾಲ್ ಸಿಂಗ್ ವಿರುದ್ಧ ಧರ್ಮಗಳ ನಡುವೆ ಧ್ವೇಷ ಹರಡಿದ ಪ್ರಕರಣ ಸೇರಿದಂತೆ ಹಲವು ಆರೋಪಗಳಿದ್ದು, ಕಳೆದ ಕೆಲವು ದಿನಗಳಿಂದ ಪಂಜಾಬ್ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದಾಗ್ಯೂ ಈತನನ್ನು ಬಂಧಿಸಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಈತನ ಹಲವಾರು ಅನುಯಾಯಿಗಳನ್ನು ಬಂಧಿಸಿದ್ದು, ಈ ಕಾರ್ಯಾಚರಣೆಯ ವಿರುದ್ಧ ವಿದೇಶಗಳಲ್ಲಿರುವ ಖಲಿಸ್ತಾನಿ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಭಾರತೀಯ ರಾಯಭಾರ ಕಛೇರಿ ಮೇಲೆ ದಾಳಿ ನಡೆಸಿವೆ.