Thursday, July 16, 2026
Homeಟಾಪ್ ನ್ಯೂಸ್HIGH COURT : ಅಣ್ಣನ ಪ್ರೀತಿ ಕಳೆದುಕೊಂಡ ತಮ್ಮನಿಗೂ ಇದೆ ಪರಿಹಾರದ ಹಕ್ಕು: ಬಿ.ಟೆಕ್ ವಿದ್ಯಾರ್ಥಿ...

HIGH COURT : ಅಣ್ಣನ ಪ್ರೀತಿ ಕಳೆದುಕೊಂಡ ತಮ್ಮನಿಗೂ ಇದೆ ಪರಿಹಾರದ ಹಕ್ಕು: ಬಿ.ಟೆಕ್ ವಿದ್ಯಾರ್ಥಿ ಸಾವು ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು : ರಸ್ತೆ ಅಪಘಾತದಲ್ಲಿ (road accident) ಅಣ್ಣನನ್ನು (elder brother )ಕಳೆದುಕೊಂಡ ಕಿರಿಯ ಸಹೋದರನ (younger brother) ಹಕ್ಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (High Court)  ಅತ್ಯಂತ ಭಾವುಕ ಹಾಗೂ ಕಾನೂನಾತ್ಮಕವಾಗಿ ಮಹತ್ವದ ತೀರ್ಪನ್ನು ನೀಡಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ಅವಲಂಬಿತನಾದ ಕಿರಿಯ ಸಹೋದರನೂ ಕೇವಲ ಆರ್ಥಿಕ ಪೋಷಣೆಯಷ್ಟೇ ಅಲ್ಲದೆ, ಅಣ್ಣನ ಪ್ರೀತಿ ಮತ್ತು ಮಮಕಾರದಿಂದ ವಂಚಿತನಾಗಿರುತ್ತಾನೆ. ಆದ್ದರಿಂದ, ಪೋಷಕರಿಗೆ ಸಿಗುವ ಪರಿಹಾರದ ಮೊತ್ತದಲ್ಲಿ ಪ್ರತ್ಯೇಕ ಪಾಲು ಪಡೆದುಕೊಳ್ಳುವ ಕಾನೂನುಬದ್ಧ ಹಕ್ಕು ತಮ್ಮನಿಗೂ ಇರುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

23 ಲಕ್ಷದ ಪರಿಹಾರ ಬರೋಬ್ಬರಿ 39 ಲಕ್ಷಕ್ಕೆ ಹೆಚ್ಚಳ!

ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬಿ.ಟೆಕ್ ವಿದ್ಯಾರ್ಥಿಯೊಬ್ಬನ ಕುಟುಂಬಕ್ಕೆ ಈ ಹಿಂದೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು (ಎಂಎಸಿಟಿ) ಒಟ್ಟು ₹23,78,000 ಪರಿಹಾರ ಘೋಷಿಸಿತ್ತು. ಆದರೆ, ಈ ಮೊತ್ತ ತೀರಾ ಕಡಿಮೆ ಎಂದು ಆಕ್ಷೇಪಿಸಿ ಆಂಧ್ರಪ್ರದೇಶದ ಅನಂತಪುರ ಮೂಲದ ಮೃತನ ಪೋಷಕರಾದ ಚಾಕಲಿ ರಾಮಾಂಜಿನಪ್ಪ, ಸಿ ಶಿವಮ್ಮ ಹಾಗೂ ಸಹೋದರ ಚಾಕಲಿ ಲೋಕೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠವು, ಪರಿಹಾರದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಅಂದರೆ ₹39,45,000ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಬಿ.ಟೆಕ್ ವಿದ್ಯಾರ್ಥಿ ‘ಕೌಶಲರಹಿತ ಕಾರ್ಮಿಕ’ ಅಲ್ಲ!
ನ್ಯಾಯಾಧಿಕರಣವು ಈ ಹಿಂದೆ ಮೃತ ವಿದ್ಯಾರ್ಥಿಯ ಕಾಲ್ಪನಿಕ ಮಾಸಿಕ ಆದಾಯವನ್ನು ಕೇವಲ ₹15 ಸಾವಿರ ಎಂದು ಪರಿಗಣಿಸಿತ್ತು. ಇದನ್ನು ತಳ್ಳಿಹಾಕಿದ ಹೈಕೋರ್ಟ್, ಮೃತ ಗಣೇಶ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದರಿಂದ ಆತನನ್ನು ಕೌಶಲರಹಿತ ಕಾರ್ಮಿಕ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ವಿವಿಧ ತೀರ್ಪುಗಳ ಅನ್ವಯ ಇಂಜಿನಿಯರಿಂಗ್ ಅಥವಾ ಬಿ.ಟೆಕ್ ವಿದ್ಯಾರ್ಥಿಗಳ ಕಾಲ್ಪನಿಕ ಮಾಸಿಕ ಆದಾಯವನ್ನು ಕನಿಷ್ಠ ₹25 ಸಾವಿರ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ. ಆದಾಯದ ಮಿತಿಯನ್ನು ಹೆಚ್ಚಿಸಿದ ಕಾರಣ ಒಟ್ಟು ಪರಿಹಾರದ ಮೊತ್ತ ಹೆಚ್ಚಳವಾಗಿದ್ದು, ಹೆಚ್ಚುವರಿ ಮೊತ್ತ ₹15,67,000 ವನ್ನು ವಾರ್ಷಿಕ ಶೇ. 6 ರಷ್ಟು ಬಡ್ಡಿಯೊಂದಿಗೆ ಕುಟುಂಬಕ್ಕೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗಿದೆ.

ಹೆತ್ತವರಿಗೂ ಸಿಕ್ಕಿತು ಹೆಚ್ಚಿನ ಹಣ, ತಮ್ಮನಿಗೂ ಲಭಿಸಿತು ಪಾಲು!
ನ್ಯಾಯಾಧಿಕರಣವು ಈ ಹಿಂದೆ ಮೃತನ ತಂದೆ-ತಾಯಿಗೆ ತಲಾ ₹40 ಸಾವಿರ ಪ್ರೀತಿ-ವಾತ್ಸಲ್ಯದ ನಷ್ಟದ ಪರಿಹಾರ ಘೋಷಿಸಿತ್ತು. ಈಗ ಹೈಕೋರ್ಟ್ ಅದನ್ನು ತಲಾ ₹44 ಸಾವಿರಗಳಿಗೆ ಹೆಚ್ಚಿಸಿದೆ. ಇದರೊಂದಿಗೆ, ಅಣ್ಣನ ಪ್ರೀತಿಯನ್ನು ಕಳೆದುಕೊಂಡ ಕಿರಿಯ ಸಹೋದರನಿಗೂ ಪ್ರತ್ಯೇಕವಾಗಿ ₹44 ಸಾವಿರ ಪರಿಹಾರವನ್ನು ಘೋಷಿಸಿದೆ. ಪರಿಷ್ಕೃತ ಆದೇಶದ ಪ್ರಕಾರ, ಮೃತನ ಸಹೋದರ ₹44 ಸಾವಿರ ಮತ್ತು ಅದಕ್ಕೆ ತಕ್ಕ ಬಡ್ಡಿಯನ್ನು ಮಾತ್ರ ಪಡೆಯಲಿದ್ದು, ಇನ್ನುಳಿದ ಬೃಹತ್ ಮೊತ್ತದಲ್ಲಿ ಮೃತನ ತಂದೆ ಮತ್ತು ತಾಯಿ ಸಮಾನ ಪಾಲು ಪಡೆಯಲಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ನಡೆದಿದ್ದ ಭೀಕರ ದುರಂತ!
ಈ ಪ್ರಕರಣದ ಹಿನ್ನೆಲೆ ನೋಡುವುದಾದರೆ, ಅನಂತಪುರ ಮೂಲದ ಬಿ.ಟೆಕ್ ವಿದ್ಯಾರ್ಥಿ ಚಾಕಲಿ ಗಣೇಶ್ ಎಂಬ ಯುವಕ ಮಾಲ್ ಒಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ 2021ರ ಜುಲೈ 18ರಂದು ಬೆಂಗಳೂರಿನ ಯಲಹಂಕದ ಅಲ್ಲಾಳಸಂದ್ರ ಸೇತುವೆಯ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಆತನ ಬೈಕ್ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜುಲೈ 19ರಂದು ಕೊನೆಯುಸಿರೆಳೆದಿದ್ದನು. ಯುವಕನ ಅಕಾಲಿಕ ಮರಣದಿಂದ ಕಂಗಾಲಾಗಿದ್ದ ಕುಟುಂಬಕ್ಕೆ ಹೈಕೋರ್ಟ್‌ನ ಈ ತೀರ್ಪು ಆರ್ಥಿಕವಾಗಿ ದೊಡ್ಡ ಆಸರೆ ನೀಡಿದಂತಾಗಿದೆ.

ಇದನ್ನೂ ಓದಿ:  SIR: ಜಿಬಿಎ ವಾರ್ಡ್‌ಗಳಿಗೆ ಪ್ರತ್ಯೇಕ ಮತದಾರರ ಪಟ್ಟಿ ಪರಿಷ್ಕರಣೆ! ರಾಜ್ಯ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ 

ಹೆಚ್ಚಿನ ಸುದ್ದಿ

Change Language »
error: Content is protected !!