ಬೆಂಗಳೂರು: ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕೊಡಗಿನ ಹೋಂ ಸ್ಟೇ (home stay) ಒಂದರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ, ಹೋಂ ಸ್ಟೇ ಮಾಲೀಕರನ್ನು (owner) ಅಕ್ರಮವಾಗಿ (illegal) ಬಂಧಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ( high court) ಚಾಟಿ ಬೀಸಿದೆ.
ಏನಿದು ಪ್ರಕರಣ?
ಕೊಡಗಿನ ಹೋಂ ಸ್ಟೇಗೆ ಬಂದಿದ್ದ ಅಮೆರಿಕ ಮೂಲದ ಪ್ರವಾಸಿ ಮಹಿಳೆಗೆ, ಅಲ್ಲಿನ ನೌಕರನೊಬ್ಬ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಯಾವುದೇ ಭಾಗೀದಾರಿಕೆ ಇಲ್ಲದಿದ್ದರೂ, ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಕಾರಣ ನೀಡಿ ಹೋಂ ಸ್ಟೇ ಮಾಲೀಕ ಪೆಲಿಕೊಂಡ ಪೊನ್ನಪ್ಪ ಅವರನ್ನೂ ಬಂಧಿಸಿದ್ದರು.
ತಮ್ಮ ಬಂಧನ ಅಕ್ರಮ ಎಂದು ಪ್ರಶ್ನಿಸಿದ್ದ ಮಾಲೀಕ, ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ₹15 ಲಕ್ಷ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಅಂಗದ ಕಾಮತ್ ವಾದ ಮಂಡಿಸಿದ್ದರು.
ಹೋಂ ಸ್ಟೇ ಮಾಲೀಕ ಪೆಲಿಕೊಂಡ ಪೊನ್ನಪ್ಪ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ತನಿಖಾ ಸಂಸ್ಥೆಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಮೆರಿಕ ಅಥವಾ ವಿದೇಶಿ ರಾಯಭಾರ ಕಚೇರಿಗಳಿಂದ ದೂರು ಬಂದಿದೆ ಎಂಬ ಕಾರಣಕ್ಕೆ ಈ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಬಲಿಕೊಡಲು ಸಾಧ್ಯವಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅಥವಾ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ನಾಗರಿಕರನ್ನು ಬಂಧಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ.
ಅರ್ಜಿದಾರರನ್ನು ಬಂಧಿಸಿದ ಕ್ರಮವು ಕಾನೂನುಬಾಹಿರ ಎಂದು ಘೋಷಿಸಿದ ನ್ಯಾಯಾಲಯ, ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದರೂ, ಅವರಿಗೆ ಆಗಿರುವ ಅನ್ಯಾಯಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರವೇ ₹5 ಲಕ್ಷ ಪಾವತಿಸಬೇಕೆಂದು ನಿರ್ದೇಶಿಸಿದೆ.
ವಿದೇಶಿ ಪ್ರಜೆಗಳ ದೂರುಗಳ ವಿಚಾರದಲ್ಲಿ ತನಿಖಾ ಸಂಸ್ಥೆಗಳು ಅತಿ ಉತ್ಸಾಹ ತೋರಿ ದೇಶಿಯ ನಾಗರಿಕರ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು ಎಂಬ ಸಂದೇಶವನ್ನು ಹೈಕೋರ್ಟ್ ಈ ತೀರ್ಪಿನ ಮೂಲಕ ರವಾನಿಸಿದೆ.
ಇದನ್ನೂ ಓದಿ: INTERESTING FACTS : ಪೂಜೆ, ಶುಭ ಕಾರ್ಯಗಳಲ್ಲಿ ಪತ್ನಿ ಪತಿಯ ಎಡಭಾಗದಲ್ಲೇ ಕೂರೋದು ಯಾಕೆ ಗೊತ್ತಾ?