ಬೆಂಗಳೂರು: ರಾಜಧಾನಿಯಲ್ಲಿ (Bengaluru) ಇಂದು ಸಂಜೆ ಏಕಾಏಕಿ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿ ಸಂಪೂರ್ಣ ತತ್ತರಿಸಿದೆ. ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು (Heavy Rain) ನೀರಿನಲ್ಲಿ ಮುಳುಗಡೆಯಾಗಿದ್ದು, ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಹೈರಾಣಾಗಿದ್ದಾರೆ.
ಎಲ್ಲೆಲ್ಲಿ ಮಳೆ?
ನಗರದ ಹೃದಯಭಾಗ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಬಡಾವಣೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್, ಶಾಂತಿನಗರ ಹಾಗೂ ವಸಂತನಗರದ ರಸ್ತೆಗಳು ಕೆರೆಯಂತಾಗಿವೆ. ಇನ್ನುಳಿದಂತೆ ರಾಜಾಜಿನಗರ, ನಂದಿನಿ ಲೇಔಟ್, ವಿಜಯನಗರ, ನಾಗರಬಾವಿ, ಸುಬ್ರಮಣ್ಯನಗರ, ಗಿರಿನಗರ, ಬಸವನಗುಡಿ, ಜಯನಗರ, ಬನಶಂಕರಿ, ಲಗ್ಗೆರೆ, ಹೆಬ್ಬಾಳ, ಯಲಹಂಕ ಹಾಗೂ ಕೋಣನಕುಂಟೆ ಭಾಗದಲ್ಲೂ ಧಾರಾಕಾರ ಮಳೆಯಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆ ಶುರುವಾದ ಕೆಲವೇ ನಿಮಿಷಗಳಲ್ಲಿ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಅಪಾಯದ ಮಟ್ಟ ಮೀರಿ ನೀರು ತುಂಬಿಕೊಳ್ಳಲು ಆರಂಭಿಸಿತ್ತು. ಹೀಗಾಗಿ, ಹಿಂದಿನ ಅನಾಹುತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಬಿಎಂಪಿ ಮತ್ತು ಸಂಚಾರಿ ಪೊಲೀಸರು ತಕ್ಷಣವೇ ಜಾಗೃತರಾಗಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಅಂಡರ್‌ಪಾಸ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ನಗರದ ಇತರೆ ಅಂಡರ್‌ಪಾಸ್‌ಗಳಲ್ಲೂ ನೀರು ನಿಂತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಗೆ ಹಲವೆಡೆ ಅವಘಡ – ಇಬ್ಬರ ಸಾ*ವು!
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಹಾಗೂ ಸಿಡಿಲು ಸಹಿತ ಭಾರಿ ಮಳೆ (Heavy Rain) ಆರ್ಭಟಿಸುತ್ತಿದೆ. ಮಳೆ-ಗಾಳಿಯ ಹೊಡೆತಕ್ಕೆ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಸಿಡಿಲು (Thunderstrom)ಬಡಿದು ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಕರಿಯಪ್ಪ ಗೆನ್ನಾಕಿಹಾಳ್ (45) ಎಂಬ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಬಸವರಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮತ್ತೊಂದೆಡೆ, ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಜಮೀನಿನಲ್ಲಿ ಪತಿ ಹನುಮಂತಪ್ಪ ಶಿರಸಂಗಿ ಜೊತೆ ಕೆಲಸ ಮಾಡುತ್ತಿದ್ದ ಜಯಶ್ರೀ ಶಿರಸಂಗಿ (36) ಎಂಬ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಪತಿ ಹನುಮಂತಪ್ಪ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಸಿಡಿಲು ಬಡಿದು ರೋಮನ್ ಬಾವಟಿಸ್ ದಾಲ್ಮತ್ ಎಂಬುವವರಿಗೆ ಸೇರಿದ ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸಿಡಿಲಿನ ತೀವ್ರತೆಗೆ ಮಂಗಳವಾಡದ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಮೇಲ್ಛಾವಣಿಗೂ ಹಾನಿಯಾಗಿದೆ.
ಇದನ್ನೂ ಓದಿ : ಚುರುಕುಗೊಂಡ ಪೂರ್ವ ಮುಂಗಾರು – ಇಂದು 22 ಜಿಲ್ಲೆಗಳಿಗೆ ಮಳೆ ಅಲರ್ಟ್!