ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಸಮರ ಕಾನೂನಿನ ನಿರ್ಧಾರವನ್ನು ಅನುಷ್ಠಾನಗೊಳಿಸಿದ ಕೇವಲ ಆರು ಗಂಟೆಗಳಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅದನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷರು ಸಮರ ಕಾನೂನನ್ನು ಘೋಷಿಸುವ ನಿರ್ಧಾರವನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧಿಸಿದ ಹಿನ್ನೆಲೆ ಅದನ್ನು ಹಿಂಪಡೆದುಕೊಳ್ಳಲಾಗಿದೆ.
ದಕ್ಷಿಣ ಕೊರಿಯಾದ ಶಾಸಕರು ರಾಷ್ಟ್ರೀಯ ಅಸೆಂಬ್ಲಿಯ ಮಧ್ಯರಾತ್ರಿಯ ಅಧಿವೇಶನದಲ್ಲಿ ಸಮರ ಕಾನೂನು ಹೇರುವಿಕೆಯ ವಿರುದ್ಧ ಸರ್ವಾನುಮತದಿಂದ ಮತ ಚಲಾಯಿಸಿದ್ದಾರೆ. ಈ ಮೂಲಕ ಅಧ್ಯಕ್ಷರ ನಿರ್ಧಾರವನ್ನು ವಿರೋಧಿಸಿದ್ದಾರೆ. ಈ ಘೋಷಣೆಯ ಹಿನ್ನೆಲೆ ಸಂಸತ್ತಿನಲ್ಲಿ ಭಾರೀ ಪ್ರತಿಭಟನೆಗಳೂ ನಡೆದಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ 300 ಸಂಸದರಲ್ಲಿ 190 ಜನರು ಸಮರ ಕಾನೂನನ್ನು ತಿರಸ್ಕರಿಸಿದ್ದಾರೆ. ಇದರಿಂದಾಗಿ ಸಮರ ಕಾನೂನನ್ನು ತೆಗೆದುಹಾಕಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಕ್ಷಣಾ ಸಚಿವ ಸೇರಿದಂತೆ ಸುಮಾರು 12 ಸಂಸದರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ದಕ್ಷಿಣ ಕೊರಿಯಾದ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಆಘಾತಕಾರಿ ಕ್ರಮವನ್ನು ವಿಫಲಗೊಳಿಸಿದ ನಂತರ ಸಂಸದರು ಅಧ್ಯಕ್ಷ ಯೂನ್ ಸುಕ್ ಯೆಲ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ. ಅಧ್ಯಕ್ಷರ ರಾಜೀನಾಮೆಗೆ ಭಾರೀ ಒತ್ತಡ ಹೇರಲಾಗುತ್ತಿದೆ.