ನವದೆಹಲಿ: ಭಾರತದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಬಿಸಿಲಿನ ಬೇಗೆ ಇನ್ನಷ್ಟು (Heatwave) ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಉಷ್ಣ ಅಲೆಯ ತೀವ್ರತೆ ಹೆಚ್ಚಾಗಲಿದ್ದು, ಜನರು ಸೂರ್ಯನ ತಾಪಕ್ಕೆ ತತ್ತರಿಸುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲು ಸುಡಲಾರಂಭಿಸಿದ್ದು, ಏಪ್ರಿಲ್ 17ರ ವೇಳೆಗೆ ಇಲ್ಲಿನ ಗರಿಷ್ಠ ತಾಪಮಾನವು 41 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಮುನ್ಸೂಚನೆ ಇದೆ.
ಬಿಸಿಲ ಬೇಗೆಗೆ ತತ್ತರಿಸಲಿದೆ ಅರ್ಧ ಭಾರತ
ವಾಯುವ್ಯ ಭಾರತದಲ್ಲಿ ತಾಪಮಾನವು ಗಣನೀಯವಾಗಿ ಏರಿಕೆಯಾಗಲಿದ್ದು, ಏಪ್ರಿಲ್ 18ರವರೆಗೆ ಸಾಮಾನ್ಯಕ್ಕಿಂತ 4ರಿಂದ 6 ಡಿಗ್ರಿ ಸೆಲ್ಸಿಯಸ್ ಅಧಿಕ ಶಾಖ ಇರಲಿದೆ. ಇದೇ ವೇಳೆ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭ ಸೇರಿದಂತೆ ದೇಶದ ಮಧ್ಯ ಭಾಗಗಳಲ್ಲಿ ಕೂಡ 3ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗಲಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ನಿವಾಸಿಗಳಿಗೂ ಬಿಸಿಲಿನಿಂದ ಸದ್ಯಕ್ಕೆ ಮುಕ್ತಿ ಇಲ್ಲದಂತಾಗಿದ್ದು, ಅಲ್ಲಿಯೂ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಲಿದೆ. ಕರಾವಳಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಭಾಗಗಳಲ್ಲಿ ಮುಂದಿನ ಒಂದು ವಾರ ಬಿಸಿ ಗಾಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲೂ ಕೂಡ ಭಾರೀ ಉಷ್ಣ ಅಲೆಯ ನಿರೀಕ್ಷೆಯಿದೆ. ಬೇಸಿಗೆಯ ಈ ಶಾಖದ ನಡುವೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಂತಹ ಉತ್ತರ ರಾಜ್ಯಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಇದು ಬಿಸಿಲಿನ ಬೇಗೆಯನ್ನು ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ.
ಈಶಾನ್ಯ ಭಾರತಕ್ಕೆ ಮಳೆಯ ಸಿಂಚನ
ಒಂದೆಡೆ ದೇಶದ ಹೆಚ್ಚಿನ ಭಾಗಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಈಶಾನ್ಯ ಭಾರತದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ ಗಂಟೆಗೆ 30ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿರುವುದರಿಂದ ಈ ಭಾಗದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ದಿನಗಳಲ್ಲಿ ಅರ್ಧ ಭಾರತ ಬಿಸಿಲಿಗೆ ಬೆಂದಿದ್ದರೆ, ಈಶಾನ್ಯ ಭಾಗವು ಮಳೆಗೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ : ಏಪ್ರಿಲ್ 15 ರವರೆಗೆ ಮಳೆ ಸಂಭವ – ಹವಾಮಾನ ಇಲಾಖೆ ಮುನ್ಸೂಚನೆ