ರಿಚ್ಮಂಡ್: ವರ್ಜೀನಿಯಾದ ಫ್ರೆಡೆರಿಕ್ಸ್ಬರ್ಗ್ ನಲ್ಲಿ ತಮಾಷೆಗಾಗಿ ಗೇಮ್ ಆಡಲು ಹೋಗಿ 18 ವರ್ಷದ ವಿದ್ಯಾರ್ಥಿ ಮೈಕೆಲ್ ಬೋಸ್ವರ್ತ್ ಎಂಬಾತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸ್ನೇಹಿತರ ಜೊತೆ ಸೇರಿ ಡಿಂಗ್ ಡಾಂಗ್ ಡಿಚ್ ಗೇಮ್ ಆಡುವ ವೇಳೆ ಈ ದುರಂತ ಸಂಭವಿಸಿದೆ. ಡಿಂಗ್ ಡಾಂಗ್ ಡಿಚ್ ಗೇಮ್ ಆಡುವ ವೇಳೆ ಮೈಕೆಲ್ ಬೋಸ್ವರ್ತ್ ತನ್ನ ಮನೆ ಮಾಲೀಕನ ಬಾಗಿಲು ತಟ್ಟಿದ್ದಾನೆ. ಆದ್ರೆ ಈತನನ್ನು ಮನೆ ಮಾಲೀಕ ಕಳ್ಳ ಎಂದು ಭಾವಿಸಿದ್ದು ಮೈಕೆಲ್ ಬೋಸ್ವರ್ತ್ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ವಿದ್ಯಾರ್ಥಿ ದಾರುಣವಾಗಿ ಸಾವನಪ್ಪಿದ್ದಾನೆ.
ಹೀಗೆ ಗುಂಡು ಹಾರಿಸಿದ ಮನೆ ಮಾಲಿಕನ ಹೆಸರು ಟೈಲರ್ ಚೇಸ್ ಬಟ್ಲರ್. ಹೈಸ್ಕೂಲ್ ವಿದ್ಯಾರ್ಥಿ ಬೋಸ್ವರ್ತ್ ಮತ್ತು ಅವನ ಇಬ್ಬರು ಸ್ನೇಹಿತರು ತಮಾಷೆಗಾಗಿ ನೆರೆಮನೆ ಬಟ್ಲರ್ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಕಳ್ಳನೆಂದುಕೊಂಡು ಬಟ್ಲರ್, ಬೋಸ್ವರ್ತ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈಗಾಗಲೇ ಪೊಲೀಸರು ಮನೆ ಮಾಲೀಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆ ಮೂವರು ತನ್ನ ಮನೆಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಿ ಶೂಟ್ ಮಾಡಿರುವುದಾಗಿ ಬಟ್ಲರ್ ಹೇಳಿದ್ದಾರೆ ಎನ್ನಲಾಗಿದೆ.
ಇನ್ನೊಬ್ಬ ವಿದ್ಯಾರ್ಥಿ ಘಟನೆ ವಿವರಿಸಿದ್ದು, ತಾವು ಡಿಂಗ್ ಡಾಂಗ್ ಡಿಚ್ ಗೇಮ್ ಆಡುತ್ತಿದ್ದೆವು, ಆ ಪ್ರಕಾರ ಬೇರೆಯವರ ಮನೆ ಡೋರ್ ಬೆಲ್ ಮಾಡಿ ಓಡಿಹೋಗಬೇಕು. ಹೀಗೆ ಬಟ್ಲರ್ ಮನೆ ಬಾಗಿಲು ತಟ್ಟಿದಾಗ ಆತ ನಮ್ಮನ್ನು ಕಳ್ಳರು ಎಂದುಕೊಂಡು ಗುಂಡು ಹಾರಿಸಿದ.ಹೀಗಾಗಿ ಬೋಸ್ವರ್ತ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾನೆ.