ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಹೆಚ್‌ಡಿ ಕುಮಾರಸ್ವಾಮಿ ಅವರು ದೇವೇಗೌಡರ ಬಗ್ಗೆ ಮತ್ತೆ ಭಾವುಕರಾಗಿ ಮಾತನಾಡಿದ್ದಾರೆ.
ಕೆಆರ್ ಪೇಟೆಯಲ್ಲಿ ಮಾತನಾಡಿದ ಹೆಚ್‌ಡಿಕೆ, ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದೆಲ್ಲಾ ಯೋಚಿಸಬೇಡಿ, ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಇದನ್ನು ನೀವು ನಿಮ್ಮ ಕಣ್ಣಾರೆ ನೋಡಬೇಕು. ಅಲ್ಲಿಯವರೆಗೂ ನೀವು ಬದುಕಿರ್ತೀರಿ. ಯಾವುದೇ ಕಾರಣಕ್ಕೂ ಕೊರಗಿ ನಿಮ್ಮ ಜೀವ ಹೋಗ್ಬಾರದು ಎಂದು ದೇವೇಗೌಡರ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ದೇವೇಗೌಡರು 60 ವರ್ಷ ರಾಜಕೀಯ ಮಾಡಿದ್ದರೂ, ಅದರಲ್ಲಿ ಅಧಿಕಾರ ಮಾಡಿದ್ದು 10 ತಿಂಗಳು ಪ್ರಧಾನ ಮಂತ್ರಿಯಾಗಿ, 15 ತಿಂಗಳು ಮುಖ್ಯಮಂತ್ರಿಯಾಗಿ, 2-3 ವರ್ಷ ನೀರಾವರಿ ಮಂತ್ರಿಯಾಗಿ ಮಾತ್ರ. ಉಳಿದ ವರ್ಷಗಳು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ನನಗೆ 2 ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಈಗ 3ನೇ ಬಾರಿ ಮುಖ್ಯಮಂತ್ರಿಯಾಗುವುದು ನನ್ನ ಹೋರಾಟವಲ್ಲ. ನನ್ನ ಹೋರಾಟ ಬಡವರ ಬದುಕು ಸರಿಪಡಿಸಲು ಎಂದು ಹೆಚ್‌ಡಿಕೆ ಹೇಳಿದ್ದಾರೆ.