ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಕೋಮು ಸೂಕ್ಷ್ಮ ವಿಚಾರಗಳು ಮುನ್ನಲೆಗೆ ಬಂದಿದ್ದು, ನಂಜೇಗೌಡ-ಉರಿಗೌಡರ ಬಳಿಕ ಮದರಸಾ ಬ್ಯಾನ್ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ. ಬೆಳಗಾವಿಯಲ್ಲಿ ಮಾತನಾಡಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ರಾಜ್ಯ ರಾಜಕಾರಣದಲ್ಲಿ ಮದರಸಾ ಬ್ಯಾನ್ ಚರ್ಚೆಗೆ ಮುನ್ನುಡಿ ಹಾಕಿದ್ದಾರೆ.
ಅದಕ್ಕೂ ಮುನ್ನ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಮದರಸಾ ಬ್ಯಾನ್ ಬಗ್ಗೆ ಹೇಳಿಕೆ ನೀಡಿದ್ದರಾದರೂ, ಮುಂದಿನ ಬಾರಿ ಬಿಜೆಪಿ ಸರ್ಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮದರಸಾಗಳನ್ನು ಬ್ಯಾನ್ ಮಾಡುವುದಾಗಿ ಯತ್ನಾಳ್ ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಉರಿಗೌಡ ಮತ್ತು ನಂಜೇಗೌಡರ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಪ್ರಚಾರವನ್ನು ಟೀಕಿಸುತ್ತಲೇ ಬಂದಿರುವ ಮಾಜಿ ಸಿಎಂ ಹೆಚ್‌ಡಿಕೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ʼಬಿಜೆಪಿ ಅಧಿಕಾರಕ್ಕೆ ಬಂದರೆ ತಾನೇ ನಿಷೇಧಿಸುವುದುʼ ಎಂದು ತಿರುಗೇಟು ನೀಡಿದ್ದಾರೆ.
ಹಾಸನದ ಸಕಲೇಶಪುರ ತಾಲೂಕಿನ ಶುಕ್ರವಾರಸಂತೆಯಲ್ಲಿ ಮಾತನಾಡಿದ ಹೆಚ್‌ಡಿಕೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಬಿಜೆಪಿಯವರು ಹೋಗುತ್ತಿರುವ ಮಾರ್ಗ ನೋಡಿದರೆ ಹಾಗನ್ನಿಸುತ್ತದೆ. ಏನಾದರೂ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೆ ಇಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.