ಬೆಂಗಳೂರು: ಜೆಡಿಎಸ್ (JDS) ಪಕ್ಷವು ರಾಜ್ಯದಲ್ಲಿ 120 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೂ ನಾನೇನು ಸಾಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ( HD Kumaraswamy) ಅವರು ಮಾಜಿ ಸಚಿವ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಅವರಿಗೆ ಅತ್ಯಂತ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರು ಮೊದಲು 120 ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಚೆಲುವರಾಯಸ್ವಾಮಿ ಇತ್ತೀಚೆಗೆ ಸವಾಲು ಹಾಕಿದ್ದರು. ಈ ಹೇಳಿಕೆಗೆ ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 20 ವರ್ಷಗಳಿಂದ ನನ್ನನ್ನು ಟೀಕೆ ಮಾಡುತ್ತಲೇ ಇದ್ದಾರೆ. ನನ್ನ ವಿರುದ್ಧ ಸದಾ ವಿಷ ಕಾರುವುದೇ ಇವರ ಕೆಲಸವಾಗಿದೆ. ಆದರೆ, ಜೆಡಿಎಸ್ ಸ್ವಂತ ಬಲದ ಮೇಲೆ 120 ಸ್ಥಾನಗಳನ್ನು ಗೆದ್ದು ತೋರಿಸುವ ದಿನ ಖಂಡಿತಾ ಬರಲಿದೆ. ರಾಜ್ಯದ ಜನ ಇವರ ಆಡಳಿತವನ್ನು ಇನ್ನು ಎಷ್ಟು ದಿನ ಅಂತ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಇಂದಿನ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಂಡು ಹೋಗುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಿದೆ. ಕಠಿಣ ಪರಿಸ್ಥಿತಿಯಲ್ಲೂ ನಾವು 18 ಸ್ಥಾನಗಳನ್ನು ಗೆದ್ದು ಅಸ್ತಿತ್ವ ಉಳಿಸಿಕೊಂಡಿದ್ದೇವೆ ಎಂದರು.
100 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಇಂದು ದೇಶದಲ್ಲಿ ಏನಾಗಿದೆ? ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ನೆಚ್ಚಿಕೊಂಡು ಬದುಕುತ್ತಿದ್ದೀರಾ. ಇನ್ನು ಪಂಜಾಬ್, ಬಿಹಾರದಲ್ಲಿ ನಿಮ್ಮ ಪಕ್ಷ ಎಲ್ಲಿ ಬಂದು ನಿಂತಿದೆ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಲೇವಡಿ ಮಾಡಿದರು.