ಹಾವೇರಿ: ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ (Heavy Rain) ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ಈ ರೌದ್ರಾವತಾರಕ್ಕೆ ಜಿಲ್ಲೆಯ ರೇಷ್ಮೆ ಬೆಳೆಗಾರರು (Silk Crops) ತತ್ತರಿಸಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಿರುಗಾಳಿಯ ತೀವ್ರತೆಗೆ ರೇಷ್ಮೆ ಸಾಕಾಣಿಕೆ ಕೇಂದ್ರದ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿರುವ ಗಂಭೀರ ಘಟನೆ ಹಾವೇರಿ (Haveri) ಜಿಲ್ಲೆಯ ಕಾಟೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಕಾಟೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಶೇಖಪ್ಪ ಕಳ್ಳಿಹಾಳ ಎಂಬುವವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಕೇಂದ್ರಕ್ಕೆ ಪ್ರಕೃತಿ ವಿಕೋಪದಿಂದ ಭಾರಿ ಹಾನಿಯಾಗಿದೆ. ಸುಮಾರು 4 ಎಕರೆಯಲ್ಲಿ ರೇಷ್ಮೆ ಬೆಳೆದು, ಅದಕ್ಕೆ ಪೂರಕವಾಗಿ ಹುಳುಗಳ ಸಾಕಾಣಿಕೆಯಲ್ಲಿ ತೊಡಗಿದ್ದ ಶೇಖಪ್ಪ ಅವರ ರೇಷ್ಮೆ ಮನೆಯ ಶೆಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮಳೆ ಹಾಗೂ ಗಾಳಿಯ ಹೊಡೆತಕ್ಕೆ ಸಿಲುಕಿ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ರೇಷ್ಮೆ ಹುಳುಗಳು ಮತ್ತು ಸಾಕಾಣಿಕಾ ಪರಿಕರಗಳು ಸಂಪೂರ್ಣವಾಗಿ ನಾಶವಾಗಿವೆ.
ಮನೆ ಮತ್ತು ಶೆಡ್‌ನ ಮೇಲ್ಛಾವಣಿ ಹಾರಿಹೋದ ತಕ್ಷಣವೇ ಆತಂಕಗೊಂಡ ರೈತ ಕುಟುಂಬ, ತಡರಾತ್ರಿಯ ಸುರಿಯುವ ಮಳೆಯಲ್ಲೇ ತಾಡಪಲ್ (ತಾಡಪತ್ರಿ) ಹಾಸಿ ಉಳಿದ ಅಲ್ಪಸ್ವಲ್ಪ ರೇಷ್ಮೆ ಹುಳುಗಳನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಸಾಲಸೋಲ ಮಾಡಿ ಕಟ್ಟಿದ ರೇಷ್ಮೆ ಉದ್ಯಮ ಕ್ಷಣಾರ್ಧದಲ್ಲಿ ನೆಲಸಮವಾಗಿರುವುದನ್ನು ಕಂಡು ಅನ್ನದಾತ ಕಣ್ಣೀರು ಇಡುತ್ತಿದ್ದಾನೆ. ನಷ್ಟ ಅನುಭವಿಸಿರುವ ರೈತನಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹತ್ತೇ ನಿಮಿಷದ ಮಳೆಗೆ ಬೆಣ್ಣೆ ನಗರಿ ತಲ್ಲಣ, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿ!